ಬಾಗಲಕೋಟೆ : ಹಿರಿಯ ನಾಯಕ ಎಚ್.ವೈ. ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ವೀರಣ್ಣ ಚರಂತಿಮಠ ವಿರುದ್ಧ 19,944 ಮತಗಳ ಅಂತರದಿಂದ ಗೆದ್ದು ಮೇಟಿ ಕುಟುಂಬದ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿದ್ದಾರೆ.
ಸುತ್ತು ಸುತ್ತಿನಲ್ಲೂ ‘ಕೈ’ ಮೇಲುಗೈ
23 ಸುತ್ತಿನ ಮತ ಎಣಿಕೆಯಲ್ಲಿ 22ನೇ ಸುತ್ತಿನ ಅಂತ್ಯಕ್ಕೆ ಉಮೇಶ್ ಮೇಟಿ 92,856 ಮತಗಳನ್ನು ಪಡೆದರೆ, ಬಿಜೆಪಿಯ ವೀರಣ್ಣ ಚರಂತಿಮಠ 72,912 ಮತಗಳಿಗೆ ತೃಪ್ತಿಪಡಬೇಕಾಯಿತು. ಎರಡನೇ ಸುತ್ತಿನಲ್ಲೇ 5,000 ಮತಗಳ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್, ಕೊನೆವರೆಗೂ ಅದನ್ನು ಕಾಯ್ದುಕೊಂಡಿತು.
ಅನುಕಂಪ – ಗ್ಯಾರಂಟಿ ; ಗೆಲುವಿನ ಸೂತ್ರ
‘ಇದು ಕೇವಲ ವ್ಯಕ್ತಿಯ ಗೆಲುವಲ್ಲ, ರಾಜ್ಯ ಸರ್ಕಾರದ ಜನಪರ ಯೋಜನೆಗಳಿಗೆ ಸಿಕ್ಕ ಜಯ’ ಎಂದು ಉಮೇಶ್ ಮೇಟಿ ಸಹೋದರ ಮಲ್ಲಿಕಾರ್ಜುನ ಮೇಟಿ ಪ್ರತಿಕ್ರಿಯಿಸಿದರು. ‘ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಅಹಿಂದ ವರ್ಗದ ಬೆಂಬಲ ನಮಗೆ ದೊಡ್ಡ ಶಕ್ತಿಯಾಯಿತು’ ಎಂದರು.
ಸಿದ್ದರಾಮಯ್ಯ ಆಡಳಿತಕ್ಕೆ ಜನಮನ್ನಣೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದರು. ಈ ಫಲಿತಾಂಶ ಸಿದ್ದರಾಮಯ್ಯ ಸರ್ಕಾರದ ಆಡಳಿತಕ್ಕೆ ಜನ ಮನ್ನಣೆ ನೀಡಿದಂತಾಗಿದೆ.
ಮೇಟಿ ಕುಟುಂಬದ ಭದ್ರಕೋಟೆ
2023ರ ಚುನಾವಣೆಯಲ್ಲಿ ಎಚ್.ವೈ. ಮೇಟಿ 79,336 ಮತಗಳಿಂದ ಗೆದ್ದಿದ್ದರು. ಈಗ ಪುತ್ರ ಉಮೇಶ್ ಮೇಟಿ ಅದೇ ಕ್ಷೇತ್ರವನ್ನು ಉಳಿಸಿಕೊಂಡು ವಿಧಾನಸಭೆ ಪ್ರವೇಶಿಸಿದ್ದಾರೆ. ಮೇಟಿ ಕುಟುಂಬದ ಹಿಡಿತ ಜಿಲ್ಲೆಯ ರಾಜಕಾರಣದಲ್ಲಿ ಮತ್ತಷ್ಟು ಗಟ್ಟಿಯಾಗಿದೆ.
ಬಾಗಲಕೋಟೆ ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.





