ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು 2025-26ನೇ ಬಜೆಟ್ ಅನ್ನು ಮಂಡನೆ ಮಾಡಿದ್ದು, ಈ ಬಜೆಟ್ ಆತ್ಮವಿಶ್ವಾಸ ತುಂಬುವ ಭರವಸೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೂ ನಡೆದು ಬಂದ ಹಾದಿ ಬಡತನ ನಿರ್ಮೂಲನೆಗಾಗಿ
ಸುಧಾರಣೆ ಹಾಗೂ ಅಭಿವೃದ್ದಿಯ ಆರ್ಥಿಕ ಹೆಜ್ಜೆ ಗುರುತುಗಳಾಗಿವೆ. ಮುಂದಿನ ಹೆಗ್ಗುರಿ ಸದೃಢ ಭಾರತ ಕಟ್ಟುವ ಮಹಾಸಂಕಲ್ಪ, 2047ರ ವೇಳೆಗೆ ವಿಶ್ವ ಮುಂಚೂಣಿಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಭಾರತ ನಿರ್ಮಾಣದ ಯೋಜನೆ ರೂಪಿಸಲು ಇಂದು ಸಂಸತ್ತಿನಲ್ಲಿ ಮಂಡನೆಯಾಗಿರುವ ಬಜೆಟ್ ಆತ್ಮವಿಶ್ವಾಸ ತುಂಬುವ ಭರವಸೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದ ಕೃಷಿ, ಸಾರಿಗೆ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್ ಮಂಡಿಸುವುದರೊಂದಿಗೆ ಸತತ 8 ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞತೆಯ ದಿಟ್ಟ ಮಹಿಳೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ದಾಖಲೆ ಬರೆದಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಜೀ ಅವರ ಸರ್ಕಾರವು ದೇಶದ ಆರ್ಥಿಕತೆ ಸುಭದ್ರವಾಗಿಸಿ, ವಿಕಸಿತ ಭಾರತದ ನಿರ್ಮಾಣದ ಸಂಕಲ್ಪ ಈಡೇರಿಸುವ ಅತ್ಯುತ್ತಮ ಬಜೆಟ್ ಮಂಡಿಸಿದೆ. ಜನಸಾಮಾನ್ಯರಿಗೆ ಭರವಸೆ ಮೂಡಿಸುವ ಮೂಲಕ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ಹೇಳಿದ್ದಾರೆ.