ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ.ಅಧಿಕಾರಿಗಳು ತನಿಖೆ ನಡೆಸಿ, ಕೋಟ್ಯಾಂತರ ರೂ. ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆಂದು ವರದಿ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡು ಈಗಲಾದರೂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.18) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಅವರ ಭಂಡತನದಿಂದ ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಆದರೆ ಇದೀಗ ಇ.ಡಿ.ಅಧಿಕಾರಿಗಳು ತನಿಖೆ ನಡೆಸಿದ್ದು, ಮುಡಾದಲ್ಲಿ ಕೋಟ್ಯಾಂತರ ರೂಪಾಯಿಗಳಷ್ಟು ಹಗರಣ ನಡೆದಿದೆ ಎಂದು ವರದಿ ಮಾಡಿದೆ. ಹೀಗಾಗಿ ಸಿದ್ದರಾಮಯ್ಯನವರು ಎಚ್ಚೆತ್ತುಕೊಂಡು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಜಾತಿಗಣತಿಯ ಬಗ್ಗೆ ಮಾತನಾಡಿದ ಅವರು, 10 ವರ್ಷಗಳ ಹಿಂದೆಯೇ ಜಾತಿಗಣತಿ ಅವರ ಕೈ ಸೇರಿತ್ತು. ಅಂದೇ ಯಾಕೆ ಜಾತಿಗಣತಿಯನ್ನು ಜಾರಿಗೆ ತರಲಿಲ್ಲ? ಇದೀಗ ಹತ್ತು ವರ್ಷಗಳ ನಂತರ ಜಾತಿಗಣತಿಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಆದರೆ ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಚದುರಂಗದ ಆಟವಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.