Mysore
18
few clouds

Social Media

ಬುಧವಾರ, 28 ಜನವರಿ 2026
Light
Dark

ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕಿಳಿದ ಮಾಜಿ ಸಿಎಂ ಬಿಎಸ್‌ವೈ: ಕಾರಣ ಏನು ಗೊತ್ತಾ?

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇದೀಗ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಅಖಾಡಕ್ಕಿಳಿಯುತ್ತಿದ್ದಾರೆ. ಮಗನ ವಿರುದ್ಧ ಹಾಗೂ ಕುಟುಂಬದ ವಿರುದ್ಧ ನಾನಾ ರೀತಿಯ ಗಂಭೀರ ಆರೋಪಗಳ ಸುರಿಮಳೆಯ ನಡುವೆಯೂ ಬಿಎಸ್‌ವೈ ಪುತ್ರನನ್ನು ಕಾಪಾಡಲು ಪಣ ತೊಟ್ಟಿದ್ದಾರೆ. ಇದರ ಭಾಗ ಎಂಬಂತೆ ರಾಜ್ಯ ಬಿಜೆಪಿ ಕಚೇರಿಗೆ ಯಡಿಯೂರಪ್ಪ ನಿರಂತರವಾಗಿ ಭೇಟಿ ನೀಡುತ್ತಿದ್ದು, ತನ್ನ ರಾಜಕೀಯ ಇರುವಿಕೆಯನ್ನು ತೋರಿಸುತ್ತಿದ್ದಾರೆ.

ಬಿಜೆಪಿ ಬಣ ರಾಜಕೀಯ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಹೇಗಾದರು ಮಾಡಿ ಇಳಿಸಲೇಬೇಕು ಎಂದು ವಿರೋಧಿ ಬಣ ಪಣತೊಟ್ಟಿದೆ. ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ರೆಬೆಲ್ ಬಣದ ನಾಯಕರು ನೀಡಿದ ಹೇಳಿಕೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಬಿಎಸ್‌ವೈ ವಿರುದ್ಧ ನೇರವಾಗಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ತಿರುಗಿ ಬಿದ್ದಿದ್ದಾರೆ. ಕೆಜೆಪಿಗೆ ಹೋಗಿದ್ದ ಯಡಿಯೂರಪ್ಪ ಮರಳಿ ಬಿಜೆಪಿಗೆ ಬಂದಿದ್ಯಾಕೆ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ವರಿಷ್ಠರು ಸ್ಪಷ್ಟ ನಿರ್ಧಾರಕ್ಕೆ ಬರುತ್ತಿಲ್ಲ. ಬೇರೆ ರಾಜ್ಯಗಳ ರಾಜ್ಯಾಧ್ಯಕ್ಷರ ನೇಮಕ ಆದರೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ದೆಹಲಿ ನಾಯಕರು ನಿರ್ಧಾರವನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ವಿರೋಧಿ ಪಾಳಯದ ಕೈ ಮೇಲಾಗುವಂತೆ ಮಾಡುತ್ತಿದೆ.

ಈ ಬೆಳವಣಿಗೆಯ ನಡುವೆಯೂ ಬಿ.ಎಸ್.ಯಡಿಯೂರಪ್ಪ ಸಕ್ರಿಯವಾಗಿದ್ದಾರೆ. ಪ್ರತಿನಿತ್ಯ ಬಿಜೆಪಿ ರಾಜ್ಯ ಕಚೇರಿಗೆ ಆಗಮಿಸಿ ಪಕ್ಷದ ಕಾರ್ಯಕರ್ತರಲ್ಲೂ ಹುರುಪು ತುಂಬಿಸುತ್ತಿದ್ದಾರೆ. ಬಿಎಸ್‌ವೈ ಈ ನಡೆ ದೆಹಲಿಯ ನಾಯಕರಿಗೆ ನೀಡುತ್ತಿರುವ ಪರೋಕ್ಷ ಸಂದೇಶವಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

Tags:
error: Content is protected !!