Mysore
26
haze

Social Media

ಗುರುವಾರ, 29 ಜನವರಿ 2026
Light
Dark

ಕೆಎಂಎಫ್‌ನಿಂದ ಮತ್ತೊಂದು ಮೈಲಿಗಲ್ಲು:‌ ಏನದು ಗೊತ್ತಾ?

ಬೆಂಗಳೂರು: ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ 46 ಕೋಟಿ ರೂ.ಗಳ ದಾಖಲೆಯ ವಹಿವಾಟು ಮಾಡುವ ಮೂಲಕ ಮಹತ್ವದ ಮೈಲುಗಲ್ಲು ನಿರ್ಮಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ.38ರಷ್ಟು ವಹಿವಾಟಿನಲ್ಲಿ ಪ್ರಗತಿಯಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು.

2024ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ 33.48 ಕೋಟಿ ವಹಿವಾಟು ದಾಖಲಿಸಲಾಗಿತ್ತು. ಈ ಬಾರಿ ಹಬ್ಬದ ಅವಧಿಯ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ ಎರಡು ತಿಂಗಳು ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ ಒಂದು ಸಾವಿರ ಮೆಟ್ರಿಕ್ ಟನ್ ಮಾರಾಟ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಇದನ್ನು ಓದಿ: ಜಿಎಸ್‌ಟಿ ವಿನಾಯಿತಿ: ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ

ನಂದಿನಿ ಬ್ರಾಂಡ್‍ನ ಗುಣಮಟ್ಟ, ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ ಎಂದರು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಶುದ್ಧತೆ, ಗುಣಮಟ್ಟ ಹಾಗೂ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ನಂದಿನಿ ಬ್ರಾಂಡ್‍ಅನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಪ್ರತಿ ವರ್ಷ ದಸರಾ, ದೀಪಾವಳಿ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. 40ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿತ್ತು ಎಂದರು.

ತುಪ್ಪ, ಬೆಣ್ಣೆ, ಪನ್ನೀರು, ಸಿಹಿ ತಿನಿಸು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 185ಕ್ಕೂ ಹೆಚ್ಚು ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ದೆಹಲಿ ಅಸ್ಸೋಂ, ದುಬೈ ಮತ್ತು ಸಿಂಗಾಪುರಗಳಿಗೂ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾರುಕಟ್ಟೆಯನ್ನು ವಿಸ್ತರಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ದೆಹಲಿಯಲ್ಲಿ ಒಂದು ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ ಎಂದ ಅವರು, ಮಧುಮೇಹಿಗಳು ಬಳಸುವಂತಹ ಮೂರು ಉತ್ಪನ್ನಗಳನ್ನು ಇತ್ತೀಚೆಗೆ ಕೆಎಂಎಫ್ ಬಿಡುಗಡೆ ಮಾಡಿದೆ ಎಂದರು.

Tags:
error: Content is protected !!