ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಾಣಿಜೋದ್ಯಮಿ ವಿಜಯ್ ಟಾಟಾ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡ ರಮೇಶ್ ಗೌಡ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ 50 ಕೋಟಿ ರೂ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ವಿಜಯ್ ಟಾಟಾ ಆರೋಪ ಮಾಡಿದ್ದಾರೆ.
ಜೆಡಿಎಸ್ ಮುಖಂಡ ರಮೇಶ್ ಗೌಡ ನನ್ನ ಮನೆಗೆ ಬಂದಿದ್ದರು. ಬಳಿಕ ನಿಖಿಲ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು. ಅದೇ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಚುನಾವಣೆಗಾಗಿ 50 ಕೋಟಿ ರೂ. ಹಣ ನೀಡುವಂತೆ ನನ್ನನ್ನು ಕೇಳಿದ್ದರು. ಆದರೆ ನಾನು ಹಣ ಕೊಡಲಾಗದು ಎಂದಿದ್ದಕ್ಕೆ ಕುಮಾರಸ್ವಾಮಿ ಕೋಪಿಸಿಕೊಂಡಿದ್ದರು. ನಂತರ ನಿಮ್ಮ ಯೋಜನೆಯನ್ನು ಸಂಪೂರ್ಣವಾಗಲು ಬಿಡುವುದಿಲ್ಲ ಎಂಬಂತೆ ಬೆದರಿಕೆ ಹಾಕಿದ್ದಾರೆ. ಈಗಾಗಲೇ 2019ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಕುಟುಂಬಕ್ಕಾಗಿ ಅನೇಕ ಹಣ ಖರ್ಚು ಮಾಡಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜೆಡಿಎಸ್ ಮುಖಂಡ ರಮೇಶ್ ಗೌಡ ದೇವಸ್ಥಾನ ಕಟ್ಟಲು 5 ಕೋಟಿ ರೂ. ಹಣ ಕೇಳಿದ್ದರು. ಆದರೆ ಆ ವೇಳೆ ನಾನು ನನಗೆ ತುಂಬಾ ಕಷ್ಟವಿದೆ. ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಹಣ ನೀಡಲು ಆಗುವುದಿಲ್ಲ ಎಂದು ಹೇಳಿದ್ದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 1 ವಾರದಿಂದ ರಮೇಶ್ ಗೌಡ ಫೋನ್ ಕಾಲ್ ಮತ್ತು ಸಂದೇಶಗಳನ್ನು ಮಾಡುತ್ತಿದ್ದರು ಎಂದು ದೂರಿನಲ್ಲಿ ವಿಜಯ್ ಟಾಟಾ ಉಲ್ಲೇಖಿಸಿದ್ದಾರೆ.