Mysore
28
broken clouds

Social Media

ಭಾನುವಾರ, 25 ಜನವರಿ 2026
Light
Dark

ಎಲ್ಲಾ ಪಕ್ಷ ತೀರ್ಮಾನಿಸುತ್ತೆ, ನನಗೆ ಯಾವ ಆತುರವೂ ಇಲ್ಲ ; ಡಿಸಿಎಂ ಡಿಕೆಶಿ

ಬೆಂಗಳೂರು : ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಅರಮನೆ ಮೈದಾನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ನಿಮ್ಮ ಪಕ್ಷದ ಬಹಳಷ್ಟು ಕಾರ್ಯಕರ್ತರು ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸುತ್ತಿದ್ದಾರಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ನನಗೆ ಯಾವುದೇ ಆತುರವಿಲ್ಲ ಎಂದರು.

ನೀವು ಹಾಗೂ ಸಿಎಂ ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, “ನಾನು ದೆಹಲಿಗೆ ಹೋಗಬಹುದು. ನನಗೆ ದೆಹಲಿಯಲ್ಲಿ ಸಾಕಷ್ಟು ಕೆಲಸಗಳಿವೆ. ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ನಾನು ಸಂಸದರನ್ನು ಭೇಟಿ ಮಾಡಬೇಕಿದೆ. ದೇವರ ಕೃಪೆಯಿಂದ ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆತಿದ್ದು, ಈ ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ಧತೆಗೆ ಸೂಚಿಸಿದ್ದೇವೆ. ಮಹದಾಯಿ, ಕೃಷ್ಣಾ, ಎತ್ತಿನಹೊಳೆ ಸೇರಿದಂತೆ ನಮ್ಮ ಸಾಕಷ್ಟು ಯೋಜನೆಗಳ ಬಗ್ಗೆ ಸಂಸದರ ಜೊತೆ ಚರ್ಚೆ ಮಾಡುವುದಿದೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ” ಎಂದರು.

ಇದನ್ನು ಓದಿ: ಎಂಎಸ್‌ಪಿ ಘೋಷಿಸಿ : ಪ್ರಧಾನಿ ಮೋದಿಗೆ ಸಿಎಂ ಪತ್ರ ಕೊಟ್ಟ ದಿನೇಶ್‌ ಗುಂಡೂರಾವ್‌

ಇದರ ಜೊತೆಗೆ ಮೆಕ್ಕೆಜೋಳ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿಲ್ಲ. ಮೆಕ್ಕೆಜೋಳಕ್ಕೆ 2400 ರೂ. ಬೆಲೆ ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಮಾರುಕಟ್ಟೆಯಲ್ಲಿ ಸಿಗುತ್ತಿರುವುದು 1600 ರಿಂದ 1800 ರೂ. ಮಾತ್ರ. ಕೇಂದ್ರ ಸರ್ಕಾರ ರೈತರಿಗೆ ನೆರವು ನೀಡುತ್ತಿಲ್ಲ. ಹೀಗಾಗಿ ನಾವು ಹೋಗಿ ಮನವಿ ಸಲ್ಲಿಸಬೇಕಿದೆ. ನಾವು ಎಲ್ಲಾ ಕಾರ್ಖಾನೆ ಮಾಲೀಕರ ಸಭೆ ಕರೆಯಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಮನವಿ ಸಲ್ಲಿಸುತ್ತೇವೆ” ಎಂದರು.

ದೆಹಲಿಗೆ ಹೋದಾಗ ಪಕ್ಷದ ಕಚೇರಿಗೆ ಹೋಗುತ್ತೀರಾ ಎಂದು ಕೇಳಿದಾಗ, “ಅದು ದೆಹಲಿಯಲ್ಲಿರುವ ನಮ್ಮ ಪಾಲಿನ ದೇವಾಲಯ. ದೆಹಲಿ ಕಚೇರಿ ನಮಗೆ ಮಾರ್ಗದರ್ಶನ ನೀಡಲಿದೆ” ಎಂದು ತಿಳಿಸಿದರು.

ಒಕ್ಕಲಿಗ ಸಮುದಾಯ ನಿಮ್ಮ ಪರವಾಗಿ ನಿಂತಿದೆಯಲ್ಲ ಎಂದು ಕೇಳಿದಾಗ, “ನಾನು ಸಮುದಾಯದ ದೃಷ್ಟಿಕೋನದ ಬಗ್ಗೆ ಚರ್ಚೆ ಮಾಡುವುದಿಲ್ಲ. ಪಕ್ಷ ನನಗೆ ಮುಖ್ಯ. ಕಾಂಗ್ರೆಸ್ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಪರವಾಗಿದೆ. ಒಕ್ಕಲಿಗರೂ ಕೂಡ ಹಿಂದುಳಿದ ವರ್ಗದ ಸಮುದಾಯದವರೇ. ನಿಮ್ಮ ಮುಂಬೈ ಭೇಟಿಯನ್ನು ಬಿಜೆಪಿ ಬೇರೆ ರೀತಿ ಅರ್ಥೈಸುತ್ತಿದೆಯಲ್ಲ ಎಂದು ಕೇಳಿದಾಗ, “ನಾನು ಬಿಜೆಪಿಯ ಅರ್ಥಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಆತ್ಮೀಯ ಸ್ನೇಹಿತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಿದೆ. ಒಂದು ಗಂಟೆ ಅಲ್ಲಿದ್ದು, ನಾನು ವಾಪಸ್ಸಾಗಿದ್ದೇನೆ” ಎಂದು ತಿಳಿಸಿದರು.

Tags:
error: Content is protected !!