ಬೆಂಗಳೂರು: ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ನಟಿ ಸರೋಜಾದೇವಿ ಅವರಿಂದು ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಸರೋಜಾದೇವಿ ಅವರು, ಐದು ಭಾಷೆಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದರು.
ಕನ್ನಡದ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದ ಇವರು, ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಆದರೆ ಇಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.
ಮಹಾಕವಿ ಕಾಳಿದಾಸ ಸಿನಿಮಾದ ಮೂಲಕ ಬೆಳ್ಳಿತೆರೆ ಎಂಟ್ರಿಕೊಟ್ಟಿದ್ದ ಸರೋಜಾದೇವಿ ಅವರು, 17ನೇ ವಯಸ್ಸಿನ ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದೇ ಪ್ರಖ್ಯಾತಿ ಪಡೆದಿದ್ದರು.
ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ನಟಿಸಿದ್ದ ಸರೋಜಾದೇವಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಸರೋಜಾದೇವಿ ಅವರ ನಿಧನಕ್ಕೆ ಚಿತ್ರರಂಗದ ನಾಯಕ-ನಾಯಕಿಯರು ಸೇರಿದಂತೆ ರಾಜಕೀಯದ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ.





