Mysore
22
broken clouds
Light
Dark

ನಟ ದರ್ಶನ್ ಪ್ರಕರಣ: ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಹೇಳಿದ್ದೇನು?

ಹುಬ್ಬಳ್ಳಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ರು ಕಠಿಣ ಶಿಕ್ಷೆಯಾಗಲೀ, ಇಡೀ ಚಿತ್ರರಂಗ ಕೊಲೆಯನ್ನು ಖಂಡಿಸುತ್ತದೆ ಎಂದು ನಟ, ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಹೇಳಿದ್ದಾರೆ.

ಈ ಕುರಿತು ಇಂದು(ಜೂ.13) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ಆರೋಪಿ ಯಾರೆಂದು ತನಿಖೆಯಿಂದ ಗೊತ್ತಾಗಲಿದೆ. ನಂತರ ಕುಟುಂಬದ ಪರವಾಗಿ ನಾನು ನ್ಯಾಯ ಕೊಡಿಸಲು ಪ್ರತಿಭಟನೆ ಮಾಡುತ್ತೇನೆ ಎಂದರು.

ನನ್ನ ಅಕ್ಕ ಗೌರಿ ಕೊಲೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಕುಟುಂಬದವರಿಗೂ ಅನ್ಯಾಯವಾಗಿದೆ. ರೇಣುಕಾಸ್ವಾಮಿ ಹೆಂಡತಿಗೆ ನ್ಯಾಯ ಕೊಡಿಸುವ ಕೆಲಸವಾಗಲಿ ಎಂದು ಒತ್ತಾಯಿಸಿದ ಅವರು ಅವರ ಪತ್ನಿ ಐದು ತಿಂಗಳ ಗರ್ಭಿಣಯಾಗಿದ್ದಾರೆ. ಅವರನ್ನು ಭೇಟಿಯಾಗಿ ಸಾಂತ್ವ ಹೇಳುತ್ತೇನೆ ಎಂದರು.

ಇಂತಹ ಪ್ರಕರಣದಲ್ಲಿ ನಟ, ರಾಜಕಾರಣಿ ಯಾರೇ ಭಾಗಿಯಾದರೂ ಅವರಿಗೆ ರಾಜಮರ್ಯಾದೆ ನೀಡಬಾರದು. ಮಾಧ್ಯಮದವರು ಇಡೀ ಪ್ರಕರಣದ ವಾಸ್ತವತೆ ವರದಿ ಮಾಡಿದ್ದರಿಂದ ರೇಣುಕಾಸ್ವಾಮಿ ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಇಲ್ಲದಿದ್ದರೆ ಪ್ರಕರಣ ಕೈತಪ್ಪುತ್ತಿತ್ತು ಎಂದು ಹೇಳಿದರು.

ಇನ್ನೂ ಸಾಮಾಜಿಕ ಜಾಲತಾಣಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಇಂದ್ರಜೀತ್‌ ಲಂಕೇಶ್‌, ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ದ್ವೇಷ ಹರಡಿ, ತೇಜೋವಧೆ ಮಾಡುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಸೈಬರ್‌ ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಶಿವಮೊಗ್ಗದಲ್ಲಿ ದರ್ಶನ್‌ ಪ್ರಕರಣಕ್ಕೆ ಪ್ರತಿಕ್ರಿಯಿಸಿ,  ಕೊಲೆ ಪ್ರಕರಣ ಕುರಿತು ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ ಎಂದ ಅವರು “ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಯವರ ದುಖಃಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ” ಎಂದು ಬಸವಣ್ಣನವರ ವಚನ ಹೇಳುವ ಮೂಲಕ ಮಾರ್ಮಿಕವಾಗಿ ಉತ್ತರಿಸಿದರು.