ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ 40 ನಿಮಿಷ ವಾಕ್ ಮಾಡಲು ಅವಕಾಶ ನೀಡಲಾಗಿದೆ.
ಬೆಳಿಗ್ಗೆ ಮತ್ತು ಸಂಜೆ 40 ನಿಮಿಷ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದ್ದು, ಬ್ಯಾರಕ್‌ನ ಹೊರಭಾಗದ ಕಾರಿಡಾರ್‌ನಲ್ಲಿ ವಾಕ್ ಮಾಡಲು ಅನುಮತಿ ಸಿಕ್ಕಿದೆ.
ಈ ಸಂದರ್ಭದಲ್ಲಿ ಬೇರೆ ವಿಚಾರಣಾಧೀನ ಕೈದಿಗಳಿಗೆ ವಾಕ್ ಮಾಡಲು ಅವಕಾಶ ಇರುವುದಿಲ್ಲ. ಸುಪ್ರೀಂಕೋರ್ಟ್ ಎಚ್ಚರಿಕೆ ಬಳಿಕ ನಟ ದರ್ಶನ್ ಸುತ್ತಾಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳ ಹಿಂದೆ ನಟ ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನಟ ದರ್ಶನ್ ನ್ಯಾಯಾಧೀಶರ ಮುಂದೆ ಜೈಲಿನಲ್ಲಿ ನಿತ್ಯ ನರಕ ದರ್ಶನ ಆಗುತ್ತಿದೆ. ಒಂದು ಮನವಿ ಇದೆ. ಬಿಸಿಲು ನೋಡಿ ಒಂದು ತಿಂಗಳಾಯಿತು. ದಯವಿಟ್ಟು ನನಗೆ ಸ್ವಲ್ಪ ವಿಷ ಕೊಡಿ ಎಂದು ಮನವಿ ಮಾಡಿದ್ದರು.
ಬಳಿಕ ಮಧ್ಯಾಹ್ನದ ವೇಳೆಗೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡದಂತೆ ಆದೇಶ ಹೊರಡಿಸಿ, ಪರಪ್ಪನ ಅಗ್ರಹಾರ ಜೈಲಿನೊಳಗೆ ನಟ ದರ್ಶನ್ ಓಡಾಡಬಹುದು ಎಂದು ಹೇಳಿತ್ತು.
ಜೊತೆಗೆ ನಟ ದರ್ಶನ್‌ಗೆ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗ ದರ್ಶನ್ ಕೊಂಚ ನಿರಾಳರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





