ಬೆಂಗಳೂರು: ಪಾಕಿಸ್ತಾನದ ಪ್ರಜೆಗಳನ್ನು ಗುರುತಿಸಲು ಎಲ್ಲಾ ಜಿಲ್ಲೆಗಳಲ್ಲೂ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಎಸ್ಪಿಗಳಿಗೆ ಹಾಗೂ ನಗರ ಪ್ರದೇಶಗಳ ಆಯುಕ್ತರುಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಗೃಹಸಚಿವಾಲಯದಿಂದ ನಿನ್ನೆ ಸೂಚನೆ ಬಂದಿದೆ. ದೀರ್ಘಕಾಲದ ವೀಸಾ ಹೊಂದಿರುವವರಿಗೆ ಕೇಂದ್ರ ಸರ್ಕಾರವೇ ವಿನಾಯಿತಿ ನೀಡಿದೆ. ಪ್ರವಾಸಿಗರು ಸೇರಿದಂತೆ ಒಂದು ರೀತಿಯ ವೀಸಾ ಹೊಂದಿದವರನ್ನು ವಾಪಸ್ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಿರುವುದು ಕಂಡುಬಂದಿಲ್ಲ. ಹಾಗಾಗಿ ಅವರನ್ನೂ ವಾಪಸ್ ಕಳುಹಿಸುವುದು ಅನಿವಾರ್ಯವಾಗಿದೆ ಎಂದರು.
ಎಷ್ಟು ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ ಎಂಬುದು ಈ ಕ್ಷಣಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಎಲ್ಲಾ ಕಡೆ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು. ಪಹಲ್ಗಾಮ್ ದಾಳಿಯ ವಿರುದ್ಧ ಎಲ್ಲಾ ಭಾಗದಲ್ಲೂ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದು ನಿರಂತರ ಪ್ರಕ್ರಿಯೆ ಎಂದರು.
ಇನ್ನು ಪಹಲ್ಗಾಮ್ ದಾಳಿಯಲ್ಲಿ ಭದ್ರತಾ ವೈಫಲ್ಯ ಇದೆ ಎಂದು ಎಲ್ಲರಿಗೂ ಗೊತ್ತಿದೆ. ನಾನೂ ಸೇರಿದಂತೆ ಪ್ರತಿಯೊಬ್ಬರೂ ಅದನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.





