Mysore
19
few clouds

Social Media

ಗುರುವಾರ, 05 ಫೆಬ್ರವರಿ 2026
Light
Dark

ಸದನದ ಘನತೆಗೆ ಧಕ್ಕೆ ಆರೋಪ : ಶಾಸಕ ಶಿವಲಿಂಗೇಗೌಡ ವಜಾಕ್ಕೆ ಆಗ್ರಹ

ಹಾಸನ : ವಿಧಾನಸಭಾ ಸದನದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಬಳಸಿದ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳು ರಾಜ್ಯ ವಿಧಾನಸಭೆಯ ಘನತೆಗೆ ಭಾರೀ ಧಕ್ಕೆ ಬಗ್ಗೆ ತಿಳಿದಿದ್ದರೂ ಸುಮ್ಮನಿದ್ದ ಸಭಾಧ್ಯಕ್ಷರು 24 ಗಂಟೆ ಒಳಗೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮುಖಂಡ ಹಾಗೂ ವಕೀಲರಾದ ಜಿ. ದೇವರಾಜೇಗೌಡ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಇಂತಹ ಗಂಭೀರ ಘಟನೆ ನಡೆದರೂ ಸಭಾಧ್ಯಕ್ಷರು ನಗುತ್ತಾ ಕುಳಿತಿರುವುದು ಅತ್ಯಂತ ಖಂಡನೀಯ. ಸದನವು ಸಂವಿಧಾನದ ದೇವಾಲಯವಾಗಿದ್ದು, ಅಲ್ಲಿ ಬಳಸಿದ ಪದಗಳು ಎಲ್ಲರೂ ತಲೆತಗ್ಗಿಸುವಂತಾಗಿವೆ ಎಂದರು.

ಮಹಿಳೆಯರ ಕುರಿತು, ಅದರಲ್ಲೂ ಹೆಣ್ಣುಮಗಳ ಬಗ್ಗೆ ಲಘುವಾಗಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವುದು ಕ್ಷಮಾರ್ಹವಲ್ಲ. ಆದರೆ ಈ ಎಲ್ಲವನ್ನು ನೋಡುತ್ತಾ ಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದು ನೈತಿಕ ದೌರ್ಬಲ್ಯದ ಪರಮಾವಽ ಎಂದು ಕಿಡಿಕಾರಿದರು.

ಆರ್‌ಎಸ್‌ಎಸ್ ಬಗ್ಗೆ ಶಾಸಕ ಶಿವಲಿಂಗೇಗೌಡ ಅವರು ‘ಛಿ, ಥೂ’ ಎಂಬ ಪದ ಬಳಸಿ ಮಾತನಾಡಿರುವುದು ಅತ್ಯಂತ ಅಸಹ್ಯಕರ. ವಿಶ್ವಾದ್ಯಂತ ಒಪ್ಪಿಗೆಯಾದ ಸಂಘಟನೆಯಾದ ಆರ್ ಎಸ್ ಎಸ್ ಕಾರಣದಿಂದಲೇ ಇಂದು ರಾಜ್ಯದಲ್ಲಿ ಹಿಂದುತ್ವ ಉಳಿದಿದೆ ಎಂದರು.

ಸರ್ಕಾರಿ ಪಾರ್ಕ್ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡ ಪ್ರಕರಣದಲ್ಲಿ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ‘ಭೂಮಿ ಕಳ್ಳ’ ಎಂದು ವರದಿ ಸಲ್ಲಿಸಲಾಗಿತ್ತು. ಆ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕ್ಯಾಬಿನೆಟ್ ನಲ್ಲಿ ಬದಲಿ ನಿವೇಶನ ನೀಡಲು ತೀರ್ಮಾನ ಮಾಡಿದ್ದು ದೊಡ್ಡ ತಪ್ಪು ಎಂದು ಆರೋಪಿಸಿದರು.

ಹಾಸನ ಮತ್ತು ಅರಸೀಕೆರೆ ನಗರ ಪ್ರದೇಶದಲ್ಲಿ ಪಾರ್ಕ್ ಗಾಗಿ ಮೀಸಲಿದ್ದ ಸರ್ವೆ ನಂ.290/2ರ 10043 ಚದರ ಅಡಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಹೂಡಾ ಮೂಲಕ ಸೈಟ್ ಮಾರಾಟ ಮಾಡಿ ಅಧಿಕಾರಿಗಳಿಗೆ ಹಣ ಕೊಟ್ಟಿದ್ದಾರೆ. ಹಾಸನದಲ್ಲಿ ಉಳಿಯಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸಿ.ಟಿ.ರವಿ ಅವರು ಮಹಿಳೆಯರ ಬಗ್ಗೆ ಮಾತನಾಡಿದಾಗ ಕಾಂಗ್ರೆಸ್ ಯಾವ ಕ್ರಮ ಕೈಗೊಂಡಿತು ಎಂಬುದನ್ನು ನೆನಪಿಸಿದ ದೇವರಾಜೇಗೌಡ, ಇದೇ ಮಾನದಂಡವನ್ನು ಶಿವಲಿಂಗೇಗೌಡ ಮೇಲೂ ಅನ್ವಯಿಸಬೇಕು ಎಂದು ಆಗ್ರಹಿಸಿದರು.
ಇದೆ ವೇಳೆ ಬಿಜೆಪಿ ಮುಖಂಡ ಮನೋಹರ್, ವಕೀಲರು ಉಪಸ್ಥಿತರಿದ್ದರು.

Tags:
error: Content is protected !!