ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಪರ ಪ್ರಚಾರ ನಡೆಸಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡಸಿರುವ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರ ಕೂಡ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯ ಮಂಜುನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.
ಕೆಂಪನಹಳ್ಳಿ ನಿವಾಸಿ ಬೋರೇಗೌಡ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಾತನಾಡಬೇಕೆಂದು ಮಂಜುನಾಥ್ ಅವರನ್ನು ಕರೆಸಿಕೊಂಡಿದ್ದ ಬೋರೇಗೌಡ ಮತ್ತು ಬೆಂಬಲಿಗರು, ಅಂಚೆಪಾಳ್ಯದ ಬಳಿ ಬರುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡಿರುವ ಮಂಜುನಾಥ್ ಅವರನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.