ಬೆಂಗಳೂರು: ಜೆಡಿಎಸ್‌ನ ವರಿಷ್ಠ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು 55 ಮಂದಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ.
ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ಕೆಲ ಏಜೆಂಟರು ಕಾಂಗ್ರೆಸ್‌ನ 55 ಮಂದಿ ಶಾಸಕರುಗಳ ಹೆಸರನ್ನು ಪಟ್ಟಿ ಮಾಡಿಕೊಂಡು ಮಾತುಕತೆ ನಡೆಸುತ್ತಿರುವುದು ಸಂಚಲನ ಮೂಡಿಸಿದೆ.
ಕಾಂಗ್ರೆಸ್ ಪಕ್ಷ 140 ಶಾಸಕರ ಸಂಖ್ಯಾಬಲ ಹೊಂದಿದೆ. ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ರಾಜ್ಯ ಸರ್ಕಾರವನ್ನು ಅಸ್ತಿರಗೊಳಿಸಲು ಸಾಧ್ಯವಿಲ್ಲ ಎಂಬ ಮೊಂಡು ಧೈರ್ಯದಲ್ಲಿ ಕೈ ನಾಯಕರಿದ್ದಾರೆ. ಹೀಗಾಗಿಯೇ ಪಕ್ಷದಲ್ಲಿನ ಒಳ ಜಗಳಗಳೇ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಆಪರೇಷನ್ ಕಮಲದ ಬಗ್ಗೆ ಅಸಡ್ಡೆತನ ಕಂಡು ಬರುತ್ತದೆ.
ಈ ನಡುವೆ ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಚಾಲನೆ ನೀಡಿರುವುದು ಚರ್ಚೆಯಾಗುತ್ತಿದೆ. ಈ ಭಾರಿ ಬಿಜೆಪಿ, ಜೆಡಿಎಸ್‌ನ ಯಾವ ನಾಯಕರು ಅಧಿಕೃತವಾಗಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದೆ ಏಜೆಂಟರುಗಳನ್ನು ಮುಂದೆ ಬಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.





