ಬೆಂಗಳೂರು: ಗುತ್ತಿಗೆಯಲ್ಲಿ ಮುಸ್ಲಿಂರಿಗೆ 4% ಮೀಸಲಾತಿ ನೀಡಿರುವುದು ಸರಿಯಲ್ಲ. ಇದು ಅಸಾಂವಿಧಾನಿಕ ನಡೆ. ಇದನ್ನು ಖಂಡಿಸಿ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಇಂದು ನಗರದಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಿರುವುದರ ಕುರಿತು ಮಾತನಾಡಿದ ಅವರು, ಮುಸ್ಲಿಂರಿಗೆ 4% ಮೀಸಲಾತಿ ನೀಡುವ ಬಿಲ್ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಅಸಾಂವಿಧಾನಿಕ ನಡೆ. ಈ ಬಿಲ್‌ಗೆ ಒಪ್ಪಿಗೆ ಸೂಚಿಸದಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರದಿಂದ ಓಲೈಕೆ ರಾಜಕಾರಣ ನಡೆಯುತ್ತಿದೆ. ಮುಸ್ಲಿಂರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿರುವುದು ಸರಿಯಲ್ಲ. ಈ ಸಂಬಂಧ ಸದನದ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ. ಮೀಸಲಾತಿ ನೀಡಿರುವುದನ್ನು ಖಂಡಿಸಿ ನ್ಯಾಯಾಲಯದ ಮೋರೆ ಹೋಗುತ್ತೇವೆ ಎಂದಿದ್ದಾರೆ.