ಬೆಂಗಳೂರು: ಕೆಮ್ಮಿನ ಸಿರಪ್ ಔಷಧಗಳ 390 ಸ್ಯಾಂಪಲ್ ತಪಾಸಣೆ ಮಾಡಲಾಗುತ್ತಿದೆ. ಈವರೆಗೂ ವರದಿಯಲ್ಲಿ ಯಾವುದೇ ನೆಗೆಟಿವ್ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 390 ಸ್ಯಾಂಪಲ್ ತಪಾಸಣೆ ಮಾಡಿಸುತ್ತಿದ್ದೇವೆ. ವರದಿಯ ಯಾವುದರಲ್ಲೂ ನೆಗೆಟಿವ್ ಬಂದಿಲ್ಲ. ಎಲ್ಲಾ ಕಡೆ ಪರಿಶೀಲನೆ ನಡೆಸುತ್ತಿದ್ದೇವೆ. ಅವ್ಯವಸ್ಥೆ ಇರಬಾರದು. ನಿಮಯಗಳ ಪ್ರಕಾರ ಔಷಧ ತಯಾರು ಮಾಡಬೇಕು. ಹಾಗಾಗಿ ಅದನ್ನೆಲ್ಲಾ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಇನ್ನು ಸಂಪುಟ ಪುನಾರಚನೆ ಬಗ್ಗೆ ಮಾತನಾಡಿದ ಅವರು, ನಮಗಂತೂ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸಿಎಂ ಊಟಕ್ಕೆ ಕರೆದಿರೋದು ಅವರಿಗಷ್ಟೇ ಗೊತ್ತಿರುತ್ತದೆ. ನಮ್ಮ ಅಧ್ಯಕ್ಷರು ಹೇಳಿದ ಮೇಲೆ ಅದೇ ಸ್ಪಷ್ಟನೆ. ಪುನಾರಚನೆ ಬಗ್ಗೆ ಪಕ್ಷದ ವರಿಷ್ಠರು ಚರ್ಚೆ ಮಾಡುತ್ತಾರೆ. ಅಧ್ಯಕ್ಷರೇ ಹೇಳಿದ ಮೇಲೆ ಇನ್ನೇನು, ಗಾಳಿ ಸುದ್ದಿಗೆಲ್ಲಾ ಹೈಕಮಾಂಡ್ ಉತ್ತರ ಕೊಡಲು ಆಗಲ್ಲ ಎಂದು ತಿಳಿಸಿದರು.





