ಬೆಂಗಳೂರು : ದ್ವಿದಳ ಧಾನ್ಯ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಯೋಜನೆಗೆ ಕೇಂದ್ರ ಸರ್ಕಾರದಿಂದ 35 ಸಾವಿರ ಕೋಟಿ ರೂ.ನಷ್ಟು ಅನುದಾನ ಒದಗಿಸಲಾಗಿದೆ ಎಂದು ಕೇಂದ್ರ ಬೃಹತ್‍ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಯಲಹಂಕದಲ್ಲಿ ರಾಷ್ಟ್ರೀಯ ಕೃಷಿ ಕೀಟ ಸಂಪನೂಲ ಬ್ಯೂರೋದ 33ನೇ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಕೃಷಿಕೀಟ ಜೈವಿಕ ನಿಯಂತ್ರಣದ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಳೆಕಾಳುಗಳನ್ನು ಬೆಳೆಯಲು ರೈತರು ಮುಂದಾಗಬೇಕೆಂದು ಪ್ರಧಾನಿ ನರೇಂದ್ರಮೋದಿ ಅವರು ಸಲಹೆ ಮಾಡಿದ್ದಾರೆ. ಅಕ್ಕಿಯಿಂದಲೇ ಪೌಷ್ಠಿಕತೆ ಸಾಧ್ಯವಿಲ್ಲ. ಹೀಗಾಗಿ ದ್ವಿದಳ ಧಾನ್ಯ ಪೌಷ್ಟಿಕತೆ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.
ಇದನ್ನು ಓದಿ: ಅ.31 ರವರೆಗೆ ಸಮೀಕ್ಷೆ ವಿಸ್ತರಣೆ
ಪ್ರಧಾನಿಯವರು ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ರಾಷ್ಟ್ರವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿದೆ. ರೈತರ ಬಗ್ಗೆ ಕಳಕಳಿ ಹೊಂದಿರುವ ಮೋದಿಯವರು ರೈತರಿಗೆ ಆರ್ಥಿಕಶಕ್ತಿ ತುಂಬಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಳಪೆ ರಸಗೊಬ್ಬರ ಮಾರಾಟವಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ನಾಶವಾಗುವುದಲ್ಲದೆ, ಆಹಾರದ ಉತ್ಪಾದನೆಯಲ್ಲು ಕುಂಠಿತವಾಗುತ್ತದೆ. ಕಪ್ಪು ತಲೆ ಹುಳುವಿನ ಬಾಧೆಯಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹುಳುಗಳ ಬಾಧೆಗೆ ನನ್ನ ತೆಂಗಿನ ತೋಟವು ಒಳಗಾಗಿದೆ. ತೆಂಗಿನ ಮರದ ಗರಿಗಳು ಒಣಗುತ್ತಿವೆ. ಕ್ರಿಮಿನಾಶಕವನ್ನು ಅನಿಯಂತ್ರಿತವಾಗಿ ಬಳಸುವುದರಿಂದ ರೈತರ ಬದುಕು ಹಾಳಾಗುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ ರೈತರನ್ನು ಸನಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಾ.ಸಿ.ಎನ್.ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





