Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಹೊಸ ಪಡಿತರ ಚೀಟಿಗೆ 2.95 ಲಕ್ಷ ಅರ್ಜಿ ಬಂದಿದೆ: ಸಚಿವ ಕೆ.ಎಚ್‌. ಮುನಿಯಪ್ಪ

ಹುಬ್ಬಳ್ಳಿ : ಹೊಸ ಪಡಿತರ ಚೀಟಿ ಕೋರಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ವಿತರಿಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಹೊಸ ಪಡಿತರ ಚೀಟಿ ವಿತರಣೆಯನ್ನು ನಿಲ್ಲಿಸಿತ್ತು. ಅದನ್ನು ಪುನರಾರಂಭಿಸುತ್ತಿದ್ದೇವೆ. ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವ ಬಹುತೇಕ ಬಿಪಿಎಲ್‌ ಕಾರ್ಡ್‌ ಕೋರಿದ್ದಾರೆ. ಇವರನ್ನು ಪರಿಶೀಲಿಸಿ, ದಾಖಲಾತಿಗಳ ಆಧಾರದ ಮೇಲೆ ಬಿಪಿಎಲ್‌, ಎಪಿಎಲ್‌ ಬೇರ್ಪಡಿಸಿ, ಕಾರ್ಡ್‌ ವಿತರಿಸಲಾಗುವುದು’ ಎಂದು ಹೇಳಿದರು.

‘ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿದ್ದರೆ ಅಂತಹವರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇವು ಪತ್ತೆಯಾದರೆ ಅವುಗಳನ್ನು ರದ್ದುಪಡಿಸಲಾಗುವುದು. ಇದರ ಜೊತೆಗೆ, ಪಡಿತರ ಅಕ್ಕಿ ದುರುಪಯೋಗವಾದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಇಂತಹ ದೂರುಗಳು ಬಂದ ಕಡೆ ತನಿಖೆ ಮಾಡಿಸುತ್ತೇವೆ’ ಎಂದು ತಿಳಿಸಿದರು.

ಆಹಾರ ಭದ್ರತೆ ಕಾಯ್ದೆಯನ್ನು 2013ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಅದನ್ನು ಈಗಿನ ಬಿಜೆಪಿ ಸರ್ಕಾರ ಮುಂದುವರಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು 10 ಕೆ.ಜಿ. ಅಕ್ಕಿ ಕೊಡಲು ಹೆಚ್ಚುವರಿ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿದರೆ ಅವರು ಕೊಡಲಿಲ್ಲ. ಬಡವರಿಗೆ ನೀಡುವ ಅಕ್ಕಿ ವಿಷಯದಲ್ಲಿ ಅವರು ರಾಜಕೀಯ ಬೆರೆಸಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ಕಿ ಕೊಡುವಂತೆ ನಾವು ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರವು ಸ್ಪಂದಿಸುತ್ತಿಲ್ಲ. ಹೀಗಾಗಿ ಅಕ್ಕಿ ಬೆಳೆಯುವ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಢ ರಾಜ್ಯಗಳಿಂದ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಅಕ್ಕಿ ಸಿಕ್ಕ ತಕ್ಷಣ ಹಣ ಕೊಡುವುದನ್ನು ನಿಲ್ಲಿಸಿ, ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.

10 ಕೆ.ಜಿ ಅಕ್ಕಿಯ ಕಮಿಷನ್‌ ತಮಗೆ ನೀಡಬೇಕೆನ್ನುವ ಪಡಿತರ ವಿತರಕರ ಬೇಡಿಕೆ ಕುರಿತು ಪ್ರತಿಕ್ರಿಯಿಸಿ, ‘ಪಡಿತರ ವಿತರಕರಿಗೆ ಈಗಾಗಲೇ 5 ಕೆ.ಜಿ. ಅಕ್ಕಿಯ ಕಮಿಷನ್‌ ಸಿಗುತ್ತಿದೆ. ಇನ್ನುಳಿದ 5 ಕೆ.ಜಿ ಅಕ್ಕಿಯ ಬದಲಾಗಿ ಹಣವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೀಡುತ್ತಿದ್ದೇವೆ. ವಿತರಕರ ಬೇಡಿಕೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!