ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಪೋಷಕರಿಗೆ ಗುಡ್‌ನ್ಯೂಸ್ ನೀಡಿದೆ. 5 ವರ್ಷ 5 ತಿಂಗಳಾಗಿರುವ ಮಕ್ಕಳಿಗೆ ಇನ್ನು 1ನೇ ತರಗತಿಗೆ ದಾಖಲಾತಿ ಮಾಡಲು ಸಾಧ್ಯವಾಗಲಿದೆ.
ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಶಾಲಾ ಮಕ್ಕಳ ವಯೋಮಿತಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
1ನೇ ತರಗತಿಗೆ ವಯೋಮಿತಿ ಸಡಿಲಿಕೆ ಮಾಡುವ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. 1ನೇ ತರಗತಿಗೆ 6 ವರ್ಷ ಕಡ್ಡಾಯ ನಿಯಮದಿಂದ ವಾರ್ಷಿಕವಾಗಿ 5 ಲಕ್ಷ ಮಂದಿ ಮಕ್ಕಳಿಗೆ ಶಾಲಾ ದಾಖಲಾತಿ ಮಾಡುವ ವೇಳೆ ಸಮಸ್ಯೆ ಆಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ 5 ವರ್ಷ 5 ತಿಂಗಳು ಆಗಿರುವ ಮಕ್ಕಳಿಗೂ 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಮೂಲಕ ಪೋಷಕರಿಗೆ ಶಿಕ್ಷಣ ಇಲಾಖೆಯು ಗುಡ್‌ನ್ಯೂಸ್ ನೀಡಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ದೇಶದಲ್ಲಿ ಎಲ್ಲಾ ಕಡೆ ಕೂಡ 6 ವರ್ಷ ಕಡ್ಡಾಯ ಮಾಡಲಾಗಿದೆ. ಈ ವರ್ಷಕ್ಕೆ ಮಾತ್ರ ವಯಸ್ಸು ಸಡಿಲಿಕೆ ಮಾಡಿದ್ದೇವೆ. ಈ ವರ್ಷಕ್ಕೆ ಮಾತ್ರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಮುಂದಿನ ವರ್ಷದಿಂದ 6 ವರ್ಷ ಕಡ್ಡಾಯ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.