ಬೆಂಗಳೂರು: ಲಾಲ್‌ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ 10 ಕೋಟಿ ರೂ ಅನುದಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಅನೇಕ ಸಾರ್ವಜನಿಕರ ಜೊತೆ ಚರ್ಚೆ ಮಾಡಿ ಅವರ ಸಲಹೆ, ದೂರುಗಳನ್ನು ಆಲಿಸಿದ್ದೇನೆ. ಶೀಘ್ರದಲ್ಲೇ ಅವರ ಸಮಸ್ಯೆ ಬಗೆಹರಿಸಲಾಗುವುದು. ಲಾಲ್‌ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ 10 ಕೋಟಿ ರೂ ಅನುದಾನ ನೀಡಲು ತೀರ್ಮಾನಿಸಿದ್ದೇವೆ. ಹಿರಿಯರು ಹಾಗೂ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಮ್ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಅವಕಾಶ ಇರುವ ಕಡೆ ಲಾಲ್‌ಬಾಗ್ ಮಾದರಿಯಲ್ಲಿ ಟ್ರೀಪಾರ್ಕ್ ಮಾಡಲು ಅರಣ್ಯ ಇಲಾಖೆ ಜೊತೆ ಚರ್ಚೆ ಮಾಡುತ್ತೇನೆ. ಅದಕ್ಕೆ ಆರ್ಥಿಕ ಬೆಂಬಲವನ್ನು ನೀಡಲಾಗುವುದು ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಇಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವೈದ್ಯರು ಹಾಗೂ ಆಂಬುಲೆನ್ಸ್ ಸೇವೆ ನಿಯೋಜನೆಗೆ ತೀರ್ಮಾನಿಸಿದ್ದೇವೆ ಎಂದರು.
ಇನ್ನು ಬೆಂಗಳೂರಿನ ಕಸದ ಸಮಸ್ಯೆ ವಿಚಾರವಾಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು, ಎಲ್ಲೆಲ್ಲಿ ಬ್ಲಾಕ್ ಸ್ಪಾಟ್ ಇದೆಯೋ ಅಲ್ಲಿ ಕ್ಯಾಮರಾ ಅಳವಡಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.





