ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಏಳು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು.
ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ತಂಡ ನೀಡಿದ 132 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ 19.3 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 134 ರನ್ ಗಳಿಸಿತು.
ನತಾಲಿ ಸಿವೆರ್ ಬ್ರಂಟ್ (ಔಟಾಗದೆ 60, 55ಎ, 4X7) ಮತ್ತು ಹರ್ಮನ್‌ಪ್ರೀತ್ (37, 39ಎ, 4X5) ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 23 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ಇವರಿಬ್ಬರು ಆಸರೆಯಾದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 72 ರನ್‌ಗಳನ್ನು ಸೇರಿಸಿದರು.
ಅಮೆಲಿ ಕೆರ್ (ಔಟಾಗದೆ 14) ಕೊಡುಗೆ ನೀಡಿದರು. ಡೆಲ್ಲಿ ಪರ ರಾಧಾ ಯಾದವ್ (24ಕ್ಕೆ 1) ಮತ್ತು ಜೆಸ್ ಜೊನಾಸೆನ್ (28ಕ್ಕೆ 1) ತಲಾ ಒಂದು ವಿಕೆಟ್ ಗಳಿಸಿದರು.
ಗೌರವದ ಮೊತ್ತ: ಕೊನೆಯ ಕ್ರಮಾಂಕದ ಬ್ಯಾಟರ್ ರಾಧಾ ಯಾದವ್ ಹಾಗೂ ಶಿಖಾ ಪಾಂಡೆ ಅವರು ಡೆಲ್ಲಿ ತಂಡವು ಗೌರವದ ಮೊತ್ತ ಗಳಿಸಲು ಕಾರಣರಾಗಿದ್ದರು.
ಮುಂಬೈ ತಂಡದ ಇಸಾಬೆಲ್ ವಾಂಗ್ (42ಕ್ಕೆ3) ಮತ್ತು ಹೇಯಲಿ ಮ್ಯಾಥ್ಯೂಸ್ (5ಕ್ಕೆ3) ಅವರ ದಾಳಿಯ ಮುಂದೆ ಡೆಲ್ಲಿ ಬ್ಯಾಟರ್‌ಗಳು ಪರದಾಡಿದರು.
ಡೆಲ್ಲಿ ತಂಡವು 79 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ರಾಧಾ ದಿಟ್ಟ ಆಟವಾಡಿದರು. ಅವರು ಹಾಗೂ ಶಿಖಾ (27; 17ಎ) ಕೊನೆಯ ವಿಕೆಟ್ ಜೊತೆಯಾಟದಲ್ಲಿ 52 ರನ್ ಸೇರಿಸಿದರು. ರಾಧಾ 12 ಎಸೆತಗಳನ್ನು ಎದುರಿಸಿ 27 ರನ್ ಗಳಿಸಿದರು. ಅದರಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿದ್ದವು.
ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೆಗ್ ಲ್ಯಾನಿಂಗ್ (35; 29ಎ) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ, ಇನ್ನೊಂದು ತುದಿಯಲ್ಲಿ ಶಫಾಲಿ ವರ್ಮಾ, ಎಲೈಸ್ ಕ್ಯಾಪ್ಸಿ ಹಾಗೂ ಜೆಮಿಮಾ ರಾಡ್ರಿಗಸ್ ಸೇರಿದಂತೆ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ.
ಮುಂಬೈ ತಂಡದ ಅಮೆಲಿ ಕೆರ್ ಎರಡು ವಿಕೆಟ್‌ಗಳನ್ನು ಗಳಿಸಿದರು.
ಸಂಕ್ಷಿಪ್ತ ಸ್ಕೋರು:
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 131 (ಮೆಗ್ ಲ್ಯಾನಿಂಗ್ 35, ಶಿಖಾ ಪಾಂಡೆ ಔಟಾಗದೆ 27, ರಾಧಾ ಯಾದವ್ ಔಟಾಗದೆ 27, ಇಸಾಬೆಲ್ ವಾಂಗ್ 42ಕ್ಕೆ3, ಅಮೆಲಿ ಕೆರ್ 18ಕ್ಕೆ2, ಹೆಯಲಿ ಮ್ಯಾಥ್ಯೂಸ್ 5ಕ್ಕೆ3)
ಮುಂಬೈ ಇಂಡಿಯನ್ಸ್: 19.3 ಓವರ್‌ಗಳಲ್ಲಿ 3 ವಿಕೆಟ್‌ಗೆ 134 (ಹೇಯಲಿ ಮ್ಯಾಥ್ಯೂಸ್ 13, ನತಾಲಿ ಸಿವೆರ್ ಬ್ರಂಟ್ ಔಟಾಗದೆ 60, ಹರ್ಮನ್‌ಪ್ರೀತ್ ಕೌರ್ ರನೌಟ್ 37, ಅಮೆಲಿ ಕೆರ್ ಔಟಾಗದೆ 14).
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ ಏಳು ವಿಕೆಟ್ ಜಯ ಮತ್ತು ಪ್ರಶಸ್ತಿ