ಬೆಂಗಳೂರು: ಮೆರಿಜಾನ್ನೆ ಅವರ ಅಲ್‌ರೌಂಡರ್ ಆಟದ ನೆರವಿನಿಂದ ಅತಿಥೇಯ ಆರ್‌ಸಿಬಿ ತಂಡವನ್ನು ತವರಿನಂಗಳದಲ್ಲಿ ಸೋಲಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿದೆ.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಸೋಲುವ ಮೂಲಕ ಆರ್‌ಸಿಬಿ ಈ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು. ಈ ಮೂಲಕ ಆರ್ಸಿಬಿಗೆ 195 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು. ಇತ್ತ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ತಂಡ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಆ ಮೂಲಕ 25 ರನ್‌ಗಳ ಅಂತರದ ಸೋಲು ಕಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ನಾಯಕಿ ಮೆಗ್ ಲ್ಯಾನಿಂಗ್ 11 ಕಲೆ ಹಾಕಿದರೆ, ಶಫಾಲಿ ವರ್ಮಾ 31 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ಸಹಿತ ಅರ್ಧಶತಕ ಸಿಡಿಸಿದರು. ಆಲಿಸ್ ಕ್ಯಾಪ್ಸಿ ಕೂಡ 46 ರನ್‌ಗಳ ಉತ್ತಮ ಜೊತೆಯಾಟ ಆಡಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮರಿಜಾನ್ನೆ ಕೆಪ್ ಹಾಗೂ ಜೆಸ್ ಜೊನಾಸೆನ್ ತಲಾ 16 ಎಸೆತಗಳಲ್ಲಿ ಕ್ರಮವಾಗಿ 32 ಹಾಗೂ 36 ರನ್ ಕಲೆಹಾಕಿ ತಂಡವನ್ನು ಬೃಹತ್ 195ರ ಗಡಿ ತಲುಪಿಸಿದರು.
ಆರ್‌ಸಿಬಿ ಪರ ಡಿವೈನ್ ಮತ್ತು ಕ್ಲಾರ್ಕ್ ತಲಾ 2 ವಿಕೆಟ್ ಪಡೆದರು.
ಈ ಬೃಹತ್ ಮೊತ್ತ ಬೆನ್ನತ್ತಿದ್ದ ಆರ್‌ಸಿಬಿ ಮತ್ತೊಮ್ಮೆ ನಿರಾಸೆ ಉಂಟಾಯಿತು. ನಾಯಕಿ ಸ್ಮೃತಿ ಮಂದನಾ ಅವರ ಏಕಾಂಗಿ ಹೋರಾಟ ತಂಡವನ್ನು ಗೆಲುವಿನ ದಡ ಕೊಂಡ್ಯೊಯ್ಯಲು ಸಾಧ್ಯವಾಗಲಿಲ್ಲ. ನಾಯಕಿ ಸ್ಮೃತಿ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 74 ರನ್ ಕಲೆಹಾಕಿ ತಮ್ಮ ಇನ್ನಿಂಗ್ಸ್ ಮೂಲಕ ಗಮನ ಸೆಳೆದರು.
ಮೇಘನಾ 36, ಡಿವೈನ್‌ವ23 ಮತ್ತು ರಿಚಾ ಘೋಷ್ 19 ಹೊರತು ಪಡಿಸಿ ಬೇರಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ. ತಂಡ ಮಧ್ಯಮ ಕ್ರಮಾಂಕದಲ್ಲಿ ಎಡವಿದ ಕಾರಣ ಈ ಟೂರ್ನಿಯಲ್ಲಿ ತನ್ನ ಮೊದಲ ಸೋಲನ್ನು ಎದುರಿಸಬೇಕಾಯಿತು.
ಡೆಲ್ಲಿ ಪರ ಜೆಸ್ ಜೊನಾಸೆನ್ 3, ಮರಿಜಾನ್ನೆ ಕೆಪ್ ಮತ್ತು ಅರುಂಧತಿ ರೆಡ್ಡಿ ತಲಾ 2 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಮರಿಜಾನ್ನೆ ಕೆಪ್