Mysore
23
overcast clouds
Light
Dark

ವಿಶ್ವಕಪ್‌ ಸೆಮಿಫೈನಲ್:‌ ಅತ್ಯುತ್ತಮ ಆಡವಾಡುತ್ತಿದ್ದಾಗಲೇ ಮೈದಾನದಿಂದ ಹೊರನಡೆದ ಗಿಲ್‌

ಪ್ರತಿಷ್ಟಿತ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದು ( ನವೆಂಬರ್‌ 15 ) ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್‌ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಿವೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿರುವ ಟೀಮ್‌ ಇಂಡಿಯಾ ಪರ ಆರಂಭಿಕರಾಗಿ ನಾಯಕ ರೋಹಿತ್‌ ಶರ್ಮಾ ಹಾಗೂ ಶುಬ್‌ಮನ್‌ ಗಿಲ್‌ ಕಣಕ್ಕಿಳಿದಿದ್ದರು.

ಈ ಜೋಡಿ ಅಬ್ಬರದ ಆಟವನ್ನು ಆಡುವ ಮೂಲಕ ಭಾರತ ತಂಡ ಉತ್ತಮ ಓಪನಿಂಗ್‌ ಪಡೆದುಕೊಂಡಿದ್ದು, ರೋಹಿತ್‌ ಶರ್ಮಾ 29 ಎಸೆತಗಳಲ್ಲಿ 45 ರನ್‌ ಗಳಿಸಿ ಔಟ್‌ ಆದರೆ, ಶುಬ್‌ಮನ್‌ ಗಿಲ್‌ 65 ಎಸೆತಗಳಲ್ಲಿ 79 ರನ್‌ ಕಲೆಹಾಕಿರುವಾಗ ರಿಟೈರ್ಡ್‌ ಹರ್ಟ್‌ ಆಗಿ ಮೈದಾನದಿಂದ ಹೊರನಡೆದಿದ್ದಾರೆ. 

ಮಿಚೆಲ್‌ ಸ್ಯಾಂಟ್ನರ್‌ ಎಸೆದ 23ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವಿರಾಟ್‌ ಕೊಹ್ಲಿ ಸಿಂಗಲ್‌ ತೆಗೆದುಕೊಂಡರು. ಈ ಸಂದರ್ಭದಲ್ಲಿ ಶುಬ್‌ಮನ್‌ ಗಿಲ್‌ ಸ್ನಾಯು ಸೆಳೆತಕ್ಕೊಳಗಾಗಿ ಕುಸಿದು ಬಿದ್ದರು. ಕೂಡಲೇ ಮೈದಾನಕ್ಕೆ ಬಂದ ವೈದ್ಯರು ಗಿಲ್‌ ತಪಾಸಣೆ ನಡೆಸಿ ಆಟ ಮುಂದುವರಿಸುವುದು ಕಷ್ಟ ಎಂದು ತಿಳಿಸಿ ಗಿಲ್‌ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದರು.

ಇನ್ನು ಇಂತಹ ಮಹತ್ವದ ಪಂದ್ಯದಲ್ಲಿ ಗಿಲ್‌ ನೀಡಿದ ಉತ್ತಮ ಪ್ರದರ್ಶನಕ್ಕೆ ಕ್ರಿಕೆಟ್‌ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಆದಷ್ಟು ಬೇಗ ಗುಣಮುಖರಾಗಿ ಎಂದು ಆಶಿಸಿದ್ದಾರೆ. ಗಿಲ್‌ ಹೊರನಡೆದ ಬಳಿಕ ಶ್ರೇಯಸ್‌ ಅಯ್ಯರ್‌ ಕಣಕ್ಕಿಳಿದಿದ್ದಾರೆ. 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ