Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

200ನೇ ಟಿ20 ಪಂದ್ಯವನ್ನು 4 ರನ್​ಗಳಿಂದ ಸೋತ ಟೀಂ ಇಂಡಿಯಾ..!

ಟ್ರಿನಿಡಾಡ್‌ : ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸೋಲಿನೊಂದಿಗೆ ಸರಣಿ ಆರಂಭಿಸಿದ್ದ ವೆಸ್ಟ್ ಇಂಡೀಸ್ ಕೊನೆಗೂ ಟಿ20 ಸರಣಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಟ್ರಿನಿಡಾಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದ್ದು, ಉತ್ತಮ ಆರಂಭದ ಲಾಭ ಪಡೆಯಲು ವಿಫಲರಾದರು.

ಪರಿಣಾಮ ವೆಸ್ಟ್ ಇಂಡೀಸ್ ನೀಡಿದ್ದ ಕೇವಲ 150 ರನ್​ಗಳ ಗುರಿ ತಲುಪಲು ಸಾಧ್ಯವಾಗದೆ ಟೀಂ ಇಂಡಿಯಾ 4 ರನ್​ಗಳ ಸೋಲು ಕಂಡಿದೆ. ಚೊಚ್ಚಲ ಪಂದ್ಯವನ್ನಾಡಿದ ಯುವ ಬ್ಯಾಟ್ಸ್​ಮನ್ ತಿಲಕ್ ವರ್ಮಾ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದರಾದರೂ ವೆಸ್ಟ್ ಇಂಡೀಸ್ ತಂಡದ ಅತ್ಯುತ್ತಮ ಬೌಲಿಂಗ್ ಮುಂದೆ ಉಳಿದ ಬ್ಯಾಟ್ಸ್​ಮನ್​ಗಳು ತತ್ತರಿಸಿದರು. ಫಲವಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಚುಟುಕು ಮಾದರಿಯಲ್ಲಿ ತನ್ನ ಮೂರನೇ ಸೋಲನ್ನು ಎದುರಿಸಬೇಕಾಯ್ತು.

ಈ ಟಿ20 ಪಂದ್ಯ ಭಾರತ ತಂಡಕ್ಕೆ ತುಂಬಾ ವಿಶೇಷವಾಗಿತ್ತು. ಏಕೆಂದರೆ ಇದು ಟೀಂ ಇಂಡಿಯಾದ 200ನೇ ಟಿ20 ಪಂದ್ಯವಾಗಿತ್ತು. 200ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಪಾಕಿಸ್ತಾನದ ನಂತರ ಈ ಮೈಲಿಗಲ್ಲು ಸಾಧಿಸಿದ ಎರಡನೇ ತಂಡವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.
ಇಂತಹ ಪರಿಸ್ಥಿತಿಯಲ್ಲಿ ಈ ಐತಿಹಾಸಿಕ ಪಂದ್ಯದಲ್ಲಿ ಟೀಂ ಇಂಡಿಯಾದಿಂದ ದಿಟ್ಟ ಪ್ರದರ್ಶನ ಹಾಗೂ ಭರ್ಜರಿ ಜಯವನ್ನು ನಿರೀಕ್ಷಿಸಲಾಗಿತ್ತು. ಇದಕ್ಕೆ ಪೂರಕವಾಗಿ ಅದ್ಭುತ ಬೌಲಿಂಗ್ ಮಾಡಿದ ಬೌಲರ್‌ಗಳು ವೆಸ್ಟ್ ಇಂಡೀಸ್ ತಂಡವನ್ನು ಕೇವಲ 149 ರನ್‌ಗಳಿಗೆ ಕಟ್ಟಿಹಾಕಿದರು. ಆದರೆ ಐಪಿಎಲ್‌ನಲ್ಲಿ ಸೂಪರ್‌ಹಿಟ್ ಬ್ಯಾಟ್ಸ್‌ಮನ್‌ಗಳೆಂದು ಕರೆಸಿಕೊಳ್ಳುವ ಆಟಗಾರರೇ ಟೀಂ ಇಂಡಿಯಾದಲ್ಲಿ ತುಂಬಿದ್ದರೂ ಈ ಅಲ್ಪ ಗುರಿಯನ್ನು ಮುಟ್ಟಲಾಗದೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರಂಭದಲ್ಲೇ ಶಾಕ್ ನೀಡಿದ ಚಹಲ್-ಕುಲ್ದೀಪ್ ಜೋಡಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಬ್ರಾಂಡನ್ ಕಿಂಗ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಐದನೇ ಓವರ್‌ನಲ್ಲಿ ದಾಳಿಗಿಳಿದ ಚಾಹಲ್ ತನ್ನ ಮೊದಲ ಎಸೆತದಲ್ಲಿ ಕೈಲ್ ಮೇಯರ್ಸ್ ವಿಕೆಟ್ ಪಡೆದರು. ನಂತರ ಮೂರನೇ ಎಸೆತದಲ್ಲಿ ಬ್ರಾಂಡನ್ ಕಿಂಗ್​ರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಹೀಗಾಗಿ 30 ರನ್ ಗಳಿಸುವಷ್ಟರಲ್ಲಿ ವೆಸ್ಟ್ ಇಂಡೀಸ್ ತಂಡದ 2 ವಿಕೆಟ್ ಪತನಗೊಂಡವು. ಬಳಿಕ ಎಂಟನೇ ಓವರ್‌ನಲ್ಲಿ ದಾಳಿಗಿಳಿದ ಕುಲ್ದೀಪ್ ಯಾದವ್ ಜಾನ್ಸನ್ ಚಾರ್ಲ್ಸ್ ಅವರನ್ನು ಔಟ್ ಮಾಡಿದರು.

ಪೊವೆಲ್-ಪೂರನ್ ಸ್ಫೋಟಕ ಬ್ಯಾಟಿಂಗ್

ಆದರೆ, ಎರಡು ಮತ್ತು ಮೂರನೇ ವಿಕೆಟ್ ನಡುವೆ ನಿಕೋಲಸ್ ಪೂರನ್ ಅವರ ಅಬ್ಬರ ಕಂಡು ಬಂತು. ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ 34 ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸಿದ್ದ ಪೂರನ್, ಚಹಾಲ್ ಅವರ ಓವರ್‌ನಲ್ಲಿ ಎರಡು ವಿಕೆಟ್‌ಗಳ ಪತನದ ಹೊರತಾಗಿಯೂ ಅದೇ ಓವರ್​ನಲ್ಲಿ ಸಿಕ್ಸರ್ ಮತ್ತು ಫೋರ್ ಸಿಡಿಸಿ ತಮ್ಮ ಇನ್ನಿಂಗ್ಸ್ ಆರಂಭಿಸಿದರು. ಇದಾದ ನಂತರವೂ ಅಬ್ಬರಿಸಿದ ಪೂರನ್ 34 ಎಸೆತಗಳಲ್ಲಿ 41 ರನ್ ಸಿಡಿಸಿ 15ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯಗೆ ಬಲಿಯಾದರು. ಬಳಿಕ ನಾಯಕ ರೋವ್​ಮನ್ ಪೊವೆಲ್ ಕೂಡ ಬಲಿಷ್ಠ ಇನ್ನಿಂಗ್ಸ್ ಆಡಿ ತಂಡವನ್ನು ಹೇಗೋ 149 ರನ್ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಓಪನರ್ ಫ್ಲಾಪ್

ಸುಲಭ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೂರನೇ ಓವರ್‌ನಲ್ಲಿಯೇ ಸ್ಪಿನ್ನರ್ ಅಕಿಲ್ ಹೊಸೈನ್ ಎಸೆತದಲ್ಲಿ ಶುಭ್​ಮನ್ ಗಿಲ್ ಸ್ಟಂಪ್ ಔಟ್ ಆದರು. ಏಕದಿನ ಸರಣಿಯ ಸ್ಟಾರ್ ಆಗಿದ್ದ ಇಶಾನ್ ಕಿಶನ್ ಕೂಡ ಈ ಬಾರಿ ಬೇಗನೇ ಪೆವಿಲಿಯನ್ ಸೇರಿಕೊಂಡರು. ಏಕದಿನ ಸರಣಿಯಲ್ಲಿ ವಿಫಲರಾಗಿದ್ದ ಸೂರ್ಯಕುಮಾರ್ ಯಾದವ್​ಗೆ ಚೊಚ್ಚಲ ಟಿ20 ಪಂದ್ಯವನ್ನಾಡಿದ ತಿಲಕ್ ವರ್ಮಾ ಉತ್ತಮ ಸಾಥ್ ನೀಡಿದರು. ಅದರಲ್ಲೂ ತಿಲಕ್ ಅವರು ಬಂದ ಕೂಡಲೇ ಸತತ ಎರಡು ಸಿಕ್ಸರ್‌ ಸಿಡಿಸುವುದರೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಆದರೆ ಸೂರ್ಯಕುಮಾರ್ ಅವರ ಕಳಪೆ ಫಾರ್ಮ್​ ಟಿ20 ಪಂದ್ಯದಲ್ಲೂ ಮುಂದುವರೆಯಿತು. ಸೂರ್ಯ ಉತ್ತಮ ಆರಂಭವನ್ನು ಪಡೆದರಾದರೂ, ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾಗಿ 10ನೇ ಓವರ್‌ನಲ್ಲಿ ಶಿಮ್ರಾನ್ ಹೆಟ್ಮೆಯರ್​ಗೆ ಕ್ಯಾಚಿತ್ತು ಔಟಾದರು. ಆ ಬಳಿಕ ಅಲ್ಲಿಯವರೆಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ತಿಲಕ್ ವರ್ಮಾ ಕೂಡ ಮುಂದಿನ ಓವರ್‌ನಲ್ಲಿ ಔಟಾದರು. ಹೀಗಾಗಿ ಜವಾಬ್ದಾರಿ ಕ್ಯಾಪ್ಟನ್ ಹಾರ್ದಿಕ್ ಮತ್ತು ಸಂಜು ಸ್ಯಾಮ್ಸನ್ ಮೇಲೆ ಬಿದ್ದಿತು. ಅದಕ್ಕೆ ಪೂರಕವಾಗಿ ಇವರಿಬ್ಬರ ನಡುವೆ 36 ರನ್‌ಗಳ ಜೊತೆಯಾಟವೂ ಬಂತ್ತು.

ಜವಬ್ದಾರಿ ಮರೆತ ಫಿನಿಶರ್ಸ್​

ಈ ಇಬ್ಬರ ಜೊತೆಯಾಟದಿಂದಾಗಿ ಭಾರತಕ್ಕೆ 30 ಎಸೆತಗಳಲ್ಲಿ 37 ರನ್‌ಗಳ ಅಗತ್ಯವಿತ್ತು. ಜೊತೆಗೆ 6 ವಿಕೆಟ್‌ಗಳು ಕೈಯಲ್ಲಿದ್ದವು. ಆದರೆ ಇಲ್ಲಿಂದ ಇದ್ದಕ್ಕಿದ್ದಂತೆ ವಿಕೆಟ್‌ಗಳ ಪತನ ಪ್ರಾರಂಭವಾಯಿತು. ಜೇಸನ್ ಹೋಲ್ಡರ್ ಎಸೆದ 16ನೇ ಓವರ್​ನಲ್ಲಿ ಮೊದಲು ಹಾರ್ದಿಕ್ ಬೌಲ್ಡ್ ಆದರೆ, ಮೂರನೇ ಎಸೆತದಲ್ಲಿ ಸ್ಯಾಮ್ಸನ್ ರನೌಟ್ ಆದರು. ಅಕ್ಷರ್ ಪಟೇಲ್ ಕೂಡ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 10 ರನ್‌ಗಳ ಅಗತ್ಯವಿತ್ತು. ಆದರೆ ರೊಮಾರಿಯೊ ಶೆಫರ್ಡ್ ಎಸೆದ ಕೊನೆಯ ಓವರ್​ನಲ್ಲಿ ಭಾರತದ ಬಾಲಂಗೋಚಿಗಳು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ