ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ 2024ರ ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 45 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಮೈಸೂರು ವಾರಿಯರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೈಸೂರು ವಾರಿಯರ್ಸ್ ಎಸ್‌ಯು ಕಾರ್ತಿಕ್, ನಾಯಕ ಕರುಣ್ ನಾಯರ್ ಹಾಗೂ ಮನೋಜ್ ಭಾಂಡಗೆ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಗೆಲ್ಲಲು 208 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತು.
ಮೈಸೂರು ವಾರಿಯರ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಎಸ್‌ಯು ಕಾರ್ತಿಕ್ 44 ಎಸೆತಗಳಲ್ಲಿ 71 ರನ್ ಗಳಿಸಿದರೆ, ಕಾರ್ತಿಕ್ ಸಿಎ ಕೇವಲ 3 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಉತ್ತಮ ಆಟವನ್ನಾಡಿದ ನಾಯಕ ಕರುಣ್ ನಾಯರ್ 45 ಎಸೆತಗಳಲ್ಲಿ 66 ರನ್ ಗಳಿಸಿದರೆ, ಹರ್ಷಿಲ್ ಧರ್ಮನಿ 6 ರನ್ ಕಲೆ ಹಾಕಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಅಬ್ಬರಿಸಿದ ಮನೋಜ್ ಭಾಂಡಗೆ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 44 ರನ್ ಬಾರಿಸಿದರು ಮತ್ತು 6 ಎಸೆತಗಳಲ್ಲಿ 7 ರನ್ ಕಲೆಹಾಕಿದ ಜಗದೀಶ ಸುಚಿತ್ ಅಜೇಯರಾಗಿ ಉಳಿದರು.
ಬೆಂಗಳೂರು ಬ್ಲಾಸ್ಟರ್ಸ್ ಪರ ನವೀನ್ ಎಂಜಿ ಎರಡು ವಿಕೆಟ್, ಕ್ರಾಂತಿ ಕುಮಾರ್ ಮತ್ತು ಶುಭಾಂಗ್ ಹೆಗ್ಡೆ ತಲಾ ಒಂದೊಂದು ವಿಕೆಟ್ ಪಡೆದರು.
ಬೆಂಗಳೂರು ಬ್ಲಾಸ್ಟರ್ಸ್ ಇನ್ನಿಂಗ್ಸ್: ಮೈಸೂರು ವಾರಿಯರ್ಸ್ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಬೆಂಗಳೂರು ಬ್ಲಾಸ್ಟರ್ಸ್ ಎದುರಾಳಿ ಪಡೆಯ ಬೌಲಿಂಗ್ ದಾಳಿಗೆ ಪರದಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಮಯಾಂಕ್ ಅಗರ್ವಾಲ್ ಕೇವಲ 6 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ಎಲ್‌ಆರ್ ಚೇತನ್ ತಂಡದ ವಿಕೆಟ್‌ಗಳು ಸಾಲು ಸಾಲಾಗಿ ಉರುಳುತ್ತಿದ್ದ ಸಂದರ್ಭದಲ್ಲಿ 51 (32) ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನುಳಿದಂತೆ ಭುವನ್ ರಾಜು 1, ಶಿವಕುಮಾರ್ ರಕ್ಷಿತ್ 5, ಶುಭಾಂಗ್ ಹೆಗ್ಡೆ 5, ಸೂರಜ್ ಅಹುಜಾ 8, ಅನಿರುದ್ಧಾ ಜೋಷಿ 18, ನವೀನ್ ಎಂಜಿ 17, ಕ್ರಾಂತಿ ಕುಮಾರ್ ಅಜೇಯ 39 (21) ರನ್ ಮತ್ತು ಮೊಹ್ಸಿನ್ ಖಾನ್ ಅಜೇಯ 4 ರನ್ ಕಲೆಹಾಕಿದರು.
ಮೈಸೂರು ವಾರಿಯರ್ಸ್ ಪರ ವಿದ್ಯಾಧರ್ ಪಾಟೀಲ್ 3 ವಿಕೆಟ್, ಕೃಷ್ಣಪ್ಪ ಗೌತಮ್ 2 ವಿಕೆಟ್, ಕೋದಂಡ ಅಜಿತ್ ಕಾರ್ತಿಕ್, ಧನುಷ್ ಗೌಡ ಹಾಗೂ ದೀಪಕ್ ದೇವಾಡಿಗ ತಲಾ ಒಂದೊಂದು ವಿಕೆಟ್ ಪಡೆದರು.