Mysore
21
overcast clouds
Light
Dark

ಕೈತಪ್ಪಿದ ಪದಕ: ಕಾರಣ ವಿವರಿಸಿದ ಮೀರಾಬಾಯಿ ಚಾನು

ಪ್ಯಾರಿಸ್:‌ ಭಾರತದ ವೆಯ್ಟ್‌ ಲಿಫ್ಟಿಂಗ್‌ ತಾರೆ ಮೀರಾಬಾಯಿ ಚಾನು ಸತತ ಎರಡನೇ ಭಾರಿ ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಪದಕ ಪಡೆಯುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು.

ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಈ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 199 ಕೆಜಿ ಭಾರ ಎತ್ತುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಚಾನು ಕೇವಲ ಒಂದು ಕೆಜಿ ಅಂತರದಲ್ಲಿ ಮೂರನೇ ಸ್ಥಾನವನ್ನು ಕಳೆದುಕೊಂಡಿದ್ದು ಭಾರತದ ಪದಕದ ನಿರೀಕ್ಷೆ ಭಗ್ನಗೊಂಡಿದೆ.

ಚೀನಾದ ಜಿಹುಯಿ ಹೌ ಅವರು 206 ಕೆಜಿ ತೂಕ ಎತ್ತಿ ಮತ್ತೊಮ್ಮೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಉಳಿದಂತೆ ರೊಮೇನಿಯಾದ ಮಿಹೇಲಾ ವೆಲೆಂಟಿನಾ 205 ಕೆಜಿ ತೂಕ ಎತ್ತಿ ಬೆಳ್ಳಿ ಪದಕ ಪಡೆದರು. ಇನ್ನು ಪದಕ ಕೈತಪ್ಪಿದಕ್ಕೆ ವಿಷಾದ ವ್ಯಕ್ತಪಡಿಸಿರುವ ಮೀರಾಬಾಯಿ ಚಾನು, ಮುಂದಿನ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಟ್ಟಿನ ನೋವಿನಿಂದ ಬಳಲುತ್ತಿದ್ದೆ
ಪ್ಯಾರಿಸ್‌ ಒಲಿಂಪಿಕ್ಸ್‌ ರೇಸ್‌ನಿಂದ ಔಟ್‌ ಆದ ಬಳಿಕ ಮಾತನಾಡಿರುವ ಚಾನು, ವೇಟ್‌ ಲಿಫ್ಟಿಂಗ್‌ ವೇಳೆ ಮುಟ್ಟಿನ ನೋವಿನಿಂದ ಬಳಲುತ್ತಿದ್ದೆ. ಇದು ನನ್ನ ಮೂರನೇ ದಿನವಾಗಿತ್ತು. ಹೀಗಾಗಿ ಅದು ನನ್ನ ಆಟದ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಿದ್ದಾರೆ.

ಮಹಿಳಾ ಆಟಗಾರ್ತಿಯರಿಗೆ ಏನದರೊಂದು ಸಮಸ್ಯೆ ಕಾಡುತ್ತಲೇ ಇರುತ್ತದೆ. ಒಮ್ಮೆ ಗಾಯಗಳಿಂದ ಇನ್ನೊಮ್ಮೆ ಮಹಿಳೆಯರ ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದಿದ್ದಾರೆ.

ಪದಕ ಗೆಲ್ಲಲು ನಾನು ಕೈಲಾದಷ್ಟು ಪ್ರಯತ್ನಿಸಿದೆ ಆದರೆ, ನನ್ನ ಅದೃಷ್ಟ ಸರಿ ಇರಲಿಲ್ಲ. ಮುಂದಿನ ಬಾರಿ ದೇಶಕ್ಕಾಗಿ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.