Mysore
21
overcast clouds
Light
Dark

ಮಹಾರಾಜ ಟ್ರೋಫಿ 2023: ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ ಭರ್ಜರಿ ಜಯ

ಬೆಂಗಳೂರು : ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಶುಭಾರಂಭ ಮಾಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕ ವಿಜಯಕುಮಾರ್ ವೈಶಾಕ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಮಯಾಂಕ್ ಅಗರ್ವಾಲ್ (4) ಅಭಿಲಾಷ್ ಶೆಟ್ಟಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದರ ಬೆನ್ನಲ್ಲೇ ಡಿ.ನಿಶ್ಚಲ್ ವಿಕೆಟ್ ಪಡೆದು ಅಭಿಲಾಷ್ ಗುಲ್ಬರ್ಗ ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೆಶ್ವತ್ ಆಚಾರ್ಯ 29 ರನ್​ಗಳಿಸಿದರೆ, ಪವನ್ ದೇಶಪಾಂಡೆ ಇನಿಂಗ್ಸ್​ 14 ರನ್​ಗಳೊಂದಿಗೆ ಕೊನೆಗೊಂಡಿತು.

ಆದರೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಸೂರಜ್ ಅಹುಜಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ತಂಡಕ್ಕೆ ಆಸರೆಯಾದ ಸೂರಜ್ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 62 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 137 ರನ್​ ಕಲೆಹಾಕಿತು. ಗುಲ್ಬರ್ಗ ಮಿಸ್ಟಿಕ್ಸ್ ಪರ 4 ಓವರ್​ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದ ಶುಭಾಂಗ್ ಹೆಗ್ಡೆ ಯಶಸ್ವಿ ಬೌಲರ್ ಎನಿಸಿಕೊಂಡರು.

138 ರನ್​ಗಳ ಗುರಿ ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ ಎಲ್​.ಆರ್ ಚೇತನ್ (36) ಹಾಗೂ ಆದರ್ಶ್ ಪ್ರಜ್ವಲ್ (31) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 63 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ಶುಭಾಂಗ್ ಹೆಗ್ಡೆ ಯಶಸ್ವಿಯಾದರು.

ಆ ಬಳಿಕ ಬಂದ ಅನೀಶ್ ಕೆ.ವಿ ಅಜೇಯ 29 ರನ್ ಬಾರಿಸಿದರೆ, ಅಮಿತ್ ವರ್ಮಾ 28 ರನ್​ಗಳ ಕೊಡುಗೆ ನೀಡಿದರು. ಪರಿಣಾಮ 17.3 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಸ್ಕೋರ್‌ ಕಾರ್ಡ್‌:

ಬೆಂಗಳೂರು ಬ್ಲಾಸ್ಟರ್ಸ್​ : ಜೆಸ್ವತ್ ಆಚಾರ್ಯ 29(19), ಸೂರಜ್ ಅಹುಜಾ 62(44), ಪವನ್ ದೇಶಪಾಂಡೆ 14(24). ಬೌಲಿಂಗ್‌: ಅಭಿಲಾಷ್ ಶೆಟ್ಟಿ 4-17-3, ಶರಣ್ ಗೌಡ 4-24-2

ಗುಲ್ಬರ್ಗ ಮಿಸ್ಟಿಕ್ಸ್​: ಎಲ್​ಆರ್​ ಚೇತನ್ 36(24), ಆದರ್ಶ್ ಪ್ರಜ್ವಲ್ 31(20), ಅನೀಶ್ ಕೆ.ವಿ 29(31)*, ಅಮಿತ್ ವರ್ಮಾ 28(20). ಬೌಲಿಂಗ್‌: ಶುಭಾಂಗ್ ಹೆಗ್ಡೆ 4-25-3, ಸರ್ಫರಾಝ್ ಅಶ್ರಫ್ 3.3-21.1

ಪಂದ್ಯ ಶ್ರೇಷ್ಠ: ಅಭಿಲಾಷ್‌ ಶೆಟ್ಟಿ

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್​ 2 ಹಾಗೂ ಸ್ಟಾರ್ ಸ್ಪೋರ್ಟ್ಸ್​ 1 ಕನ್ನಡ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಫ್ಯಾನ್ ಕೋಡ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ