ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಇಂದು ತಮ್ಮ 36 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕತಾರ್ ವಿಶ್ವಕಪ್‌ನಲ್ಲಿ ಫ್ರಾನ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 2 ಗೋಲು ಬಾರಿಸಿದ್ದ ಮೆಸ್ಸಿ ಅರ್ಜೆಂಟೀನಾ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ್ದರು. ಫುಟ್ಬಾಲ್ ಜಗತ್ತಿನ ಸಾಮ್ರಾಟನಾಗಿ ಮೆರೆಯುತ್ತಿರುವ ಮೆಸ್ಸಿ ಲೆಕ್ಕವಿಲ್ಲದಷ್ಟು ದಾಖಲೆ ಬರೆದಿದ್ದಾರೆ. ಅವುಗಳಲ್ಲಿ ಟಾಪ್ 10 ದಾಖಲೆಗಳ ವಿವರ ಇಲ್ಲಿದೆ.
ಮೆಸ್ಸಿ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು (ವರ್ಷದ ಆಟಗಾರ) ದಾಖಲೆಯ 7 ಬಾರಿ ಗೆದ್ದಿದ್ದಾರೆ.
ಬಾರ್ಸಿಲೋನಾ ಪರವಾಗಿ 672 ಗೋಲುಗಳು ಬಾರಿಸಿರುವ ಮೆಸ್ಸಿ ಒಂದೇ ಕ್ಲಬ್ ಪರ ಅತಿ ಹೆಚ್ಚು ಗೋಲುಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. 474 ಗೋಲುಗಳು- ಲಾ ಲಿಗಾದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನೂ ಮೆಸ್ಸಿ ಹೊಂದಿದ್ದಾರೆ. ಲಿಯೋನೆಲ್ ಮೆಸ್ಸಿ ಇದುವರೆಗೆ ವಿಶ್ವಕಪ್ ವೇದಿಕೆಯಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿದ್ದಾರೆ. ವಿಶ್ವಕಪ್‌ನಲ್ಲಿ 11 ಬಾರಿ ಪಂದ್ಯ ಶ್ರೇಷ್ಠರಾಗಿದ್ದಾರೆ. ಅದರಲ್ಲಿ ಅವರು ಕತಾರ್ ವಿಶ್ವಕಪ್‌ನಲ್ಲಿ ಐದು ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ತಮ್ಮ ವೃತ್ತಿಜೀವನದಲ್ಲಿ 807 ಗೋಲು ಬಾರಿಸಿರುವ ಮೆಸ್ಸಿ ಅತಿ ಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ (838 ಗೋಲುಗಳು) ನಂತರದ ಸ್ಥಾನದಲ್ಲಿದ್ದಾರೆ.
ಹಾಗೆಯೇ ಲಾ ಲಿಗಾದಲ್ಲಿ ಅತಿ ಹೆಚ್ಚು (192) ಅಸಿಸ್ಟ್ ಮಾಡಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ. ಮೆಸ್ಸಿ ಲಾ ಲಿಗಾ (36) ಮತ್ತು ಕೋಪಾ ಅಮೇರಿಕಾ (17) ನಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್‌ಗಳ ದಾಖಲೆಯನ್ನು ಹೊಂದಿದ್ದಾರೆ.
ಮೆಸ್ಸಿ ಬಾರ್ಸಿಲೋನಾ ಕ್ಲಬ್ ಪರ ದಾಖಲೆಯ 34 ಟ್ರೋಫಿಗಳನ್ನು ಗೆದ್ದಿದ್ದಾರೆ. ಫಿಫಾ ಗೋಲ್ಡನ್ ಬಾಲ್ (ಟೂರ್ನಮೆಂಟ್ ಆಟಗಾರ) ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಏಕೈಕ ಆಟಗಾರ ಮೆಸ್ಸಿ ಆಗಿದ್ದಾರೆ.