ಬೆಂಗಳೂರು: ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯಲ್ಲೂ ಫೈನಲ್ ತಲುಪಿದ್ದ ಟೀಮ್ ಇಂಡಿಯಾ, ನಿರಾಶಾದಾಯಕ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ಎದುರು 209 ರನ್‌ಗಳ ಹೀನಾಯ ಸೋಲುಂಡಿತು. ಪಂದ್ಯದಲ್ಲಿ 444 ರನ್‌ಗಳ ಗುರಿ ಬೆನ್ನತ್ತಿದ್ದ ರೋಹಿತ್ ಶರ್ಮಾ ಬಳಗ, ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲ್‌ಔಟ್ ಆಯಿತು. ಸ್ಟಾರ್ ಬ್ಯಾಟರ್‌ಗಳ ದಂಡನ್ನೇ ಹೊಂದಿರುವ ತಂಡದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಅಕ್ಷರಶಃ ಮಕಾಡೆ ಮಲಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ಶಾರ್ದುಲ್ ಠಾಕೂರ್ ಮಾತ್ರವೇ ಅರ್ಧಶತಕ ಬಾರಿಸಿದರು. ಉಳಿದ ಯಾವ ಬ್ಯಾಟರ್‌ಗಳಿಂದಲೂ ಹೋರಾಟ ಬರಲಿಲ್ಲ.
ಈ ಬಗ್ಗೆ ಮಾತನಾಡಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೆರ್ ಹುಸೇನ್, ಟೀಮ್ ಇಂಡಿಯಾದ ಬ್ಯಾಟರ್‌ಗಳು ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ಮತ್ತು ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಅವರನ್ನು ನೋಡಿ ಕಲಿಯಬೇಕು ಎಂದು ಟೀಕೆ ಮಾಡಿದ್ದಾರೆ.
“ಟೀಮ್ ಇಂಡಿಯಾ ಬ್ಯಾಟರ್ಸ್ ಪ್ರದರ್ಶನ ಬಹಳಾ ಬೇಸರ ತಂದಿದೆ. ಟೀಮ್ ಇಂಡಿಯಾ ಅಭಿಮಾನಿಗಳು ನನ್ನ ಈ ಹೇಳಿಕೆ ಕಂಡು ತಿರುಗಿಬೀಳಬಹುದು. ನನ್ನ ಪ್ರಕಾರ ಭಾರತ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಬಾಬರ್ ಆಝಮ್ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ನೋಡಿ ಕಲಿಯಬೇಕಿದೆ. ಸ್ವಿಂಗ್ ಆಗುವ ಎಸೆತಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಅವರಿಂದ ಕಲಿಯಬೇಕು. ಚೆಂಡು ಸ್ವಿಂಗ್ ಆಗುತ್ತಿರುವ ಸಂದರ್ಭದಲ್ಲಿ ಈ ಇಬ್ಬರೂ ಬ್ಯಾಟರ್‌ಗಳು ಹೆಚ್ಚು ಸಮಯ ತೆಗೆದುಕೊಂಡು ಬ್ಯಾಟ್ ಮಾಡುತ್ತಾರೆ,” ಎಂದು ಸ್ಕೈ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಪಾಠ ಮಾಡಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲ್ಯಾಂಡ್ ಚೆಂಡನ್ನು ಎರಡೂ ಕಡೆಗೆ ಸ್ವಿಂಗ್ ಮಾಡುವ ಮೂಲಕ ಭಾರತೀಯ ಬ್ಯಾಟರ್‌ಗಳಿಗೆ ಕಾಟ ಕೊಟ್ಟರು. ಐದನೇ ದಿನದಾಟದಲ್ಲಿ ಸ್ಕಾಟ್ ಬೋಲ್ಯಾಂಡ್ ಸತತ ಎಸೆತಗಳಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರನ್ನು ಔಟ್ ಮಾಡಿದರು. ಇದು ಕೊನೇ ದಿನದಲ್ಲಿ ಡ್ರಾ ಎದುರು ನೋಡುತ್ತಿದ್ದ ಟೀಮ್ ಇಂಡಿಯಾಗೆ ಮರ್ಮಾಘಾತದಂತ್ತಾಯಿತು.
ಭಾರತ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ನಿರಾಶೆ
ಅಂದಹಾಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯ ಮೊದಲ ಎರಡೂ ಆವೃತ್ತಿಗಳಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ ಭಾರತ ತಂಡಕ್ಕೆ ಟ್ರೋಫಿ ಗೆಲುವು ಮಾತ್ರ ಸಾಧ್ಯವಾಗಲಿಲ್ಲ. 2021ರ ಜೂನ್ 18ರಿಂದ 23ರವರೆಗೆ ಸೌತ್‌ಹ್ಯಾಂಪ್ಟನ್‌ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಆವೃತ್ತಿಯ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಎದುರು ಪೈಪೋಟಿ ನಡೆಸಿ 8 ವಿಕೆಟ್‌ಗಳ ಹೀನಾಯ ಸೋಲನುಭವಿಸಿತು. ಇದೀಗ ಆಸ್ಟ್ರೇಲಿಯಾ ಎದುರೂ ಮಣ್ಣುಮುಕ್ಕಿ ಬ್ಯಾಕ್ ಟು ಬ್ಯಾಕ್ ಆಘಾತಕ್ಕೊಳಗಾಯಿತು.
ಟ್ರೋಫಿ ಗೆಲುವಿನ ಬರ
2013ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎಂಎಸ್ ಧೋನಿ ಸಾರಥ್ಯದ ಭಾರತ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಆತಿಥ್ಯದ ಹಲವು ಟೂರ್ನಿಗಳಲ್ಲಿ ಭಾರತ ತಂಡ ಸೆಮಿಫೈನಲ್ ಮತ್ತು ಫೈನಲ್ ತಲುಪಿದ ಸಾಧನೆ ಮಾಡಿದೆ. ಆದರೆ, ಟ್ರೋಫಿ ಗೆಲುವು ಮಾತ್ರ ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾ 10 ವರ್ಷಗಳ ಕಾಲ ಚಾಂಪಿಯನ್ಸ್ ಪಟ್ಟಕ್ಕೇರದೇ ಉಳಿದಿದೆ.