ಮೆಲ್ಬೊರ್ನ್: ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ಆಸ್ಟ್ರೇಲಿಯಾದ ಯುವ ಆರಂಭಿಕ ಆಟಗಾರ ಸ್ಯಾಮ್ ಕಾನ್‌ಸ್ಟಸ್ ಅವರಿಗೆ ಭಾರತದ ಕ್ರಿಕೆಟರ್ ವಿರಾಟ್ ಕೊಹ್ಲಿ ಭುಜದಿಂದ ಡಿಕ್ಕಿ ಹೊಡೆದು ದಂಡನೆಗೆ ಒಳಗಾಗಿದ್ದಾರೆ.
ಐಸಿಸಿ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ವಿರಾಟ್‌ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ. ಹಾಗೆಯೇ ಯುವ ಆಟಗಾರನ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಐಸಿಸಿ ನಿಯಮದ ಪ್ರಕಾರ ಯಾವುದೇ ಕ್ರಿಕೆಟರ್ ನಾಲ್ಕು ಡಿಮೆರಿಟ್ ಪಾಯಿಂಟ್‌ಗಳಿಗೆ ಒಳಗಾದರೆ ಒಂದು ಪಂದ್ಯ ನಿಷೇಧಕ್ಕೆ ಒಳಗಾಗಬೇಕಾಗುತ್ತದೆ.
ಆಸ್ಟ್ರೇಲಿಯಾ ಮತ್ತು ಭಾರತ ನಡುವೆ 4ನೇ ಟೆಸ್ಟ್ ಪಂದ್ಯದ ವೇಳೆ, ಓವರ್ ಆದ ನಂತರ ಏಕಾಏಕಿ ಕಾನ್‌ಸ್ಟಸ್ ಬಳಿ ತೆರಳಿದ ವಿರಾಟ್ ಕೊಹ್ಲಿ ಭುಜದಿಂದ ಡಿಕ್ಕಿ ಹೊಡೆದರು. ಈ ವೇಳೆ ಇಬ್ಬರ ನಡುವೆ ಸ್ವಲ್ಪ ಸಮಯ ವಾಗ್ವಾದ ನಡೆಯಿತು.
ಈ ಘಟನೆ ಬಗ್ಗೆ 19 ವರ್ಷದ ಕಾನ್‌ಸ್ಟಸ್, ಆಟದ ಸಂದರ್ಭದಲ್ಲಿ ಹೀಗಾಗುವುದು ಸಹಜ. ಕೊಹ್ಲಿ ಆಕಸ್ಮಿಕವಾಗಿ ನನಗೆ ಡಿಕ್ಕಿ ಹೊಡೆದಿರಬಹುದು. ಕ್ರಿಕೆಟ್ ಆಟದಲ್ಲಿ ಒತ್ತಡ ಇರುವುದರಿಂದ ಇದು ಸಾಮಾನ್ಯ ಎಂದು ಹೇಳಿದ್ದರು.
ಈ ಘಟನೆ ಕುರಿತಂತೆ ಕ್ರಿಕೆಟ್‌ನ ಹಲವು ಮಾಜಿ ಆಟಗಾರರು ಟೀಕೆ ಮಾಡಿದ್ದರು. ಯುವ ಆಟಗಾರನ ಜೊತೆ ಕೊಹ್ಲಿಯ ಈ ವರ್ತನೆ ಸರಿಯಿಲ್ಲ. ಕೊಹ್ಲಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್‌ನ ಮಾಜಿ ಆಟಗಾರ ಮೈಕಲ್ ವಾನ್ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇಕಡಾ.20ರಷ್ಟು ದಂಡ ವಿಧಿಸಲಾಗಿದೆ