ಹೊಸದಿಲ್ಲಿ : ಕೃನಾಲ್ ಪಾಂಡ್ಯ ಅವರ ಆಲ್‌ರೌಂಡರ್ ಪ್ರದರ್ಶನ ಹಾಗೂ ವಿರಾಟ್ ಕೊಹ್ಲಿ ಅವರ ಸಮಯೋಚಿತ ಆಟದ ಬಲದಿಂದ ಅತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಐಪಿಎಲ್‌ನ 18ನೇ ಸೀಸನ್ ಟೇಬಲ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಈವರೆಗೆ ತಾವಾಡಿರುವ 10 ಪಂದ್ಯಗಳಿಂದ 7 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ 14 ಪಾಯಿಂಟ್‌ನೊಂದಿಗೆ ಪಾಯಿಂಟ್ಸ್ ಮೂಲಕ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿತು.
ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಬಾರಿಸಿ ಎದುರಾಳಿ ತಂಡಕ್ಕೆ 163 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿ, 6 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಡೆಲ್ಲಿ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅತಿಥೇಯ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಅಭಿಷೇಕ್ ಪೋರೆಲ್ 28(11), ಡು ಪ್ಲೆಸಿ 22(26) ರನ್ ಗಳಿಸಿ ಔಟಾದರು.
ಕನ್ನಡಿಗ ಕೆ.ಎಲ್ ರಾಹುಲ್ 41(39) ರನ್ ಗಳಿಸಿದ್ದೇ ತಂಡದ ಪರವಾಗಿ ಗಳಿಸಿದ್ದ ವೈಯಕ್ತಿಕ ಗರಿಷ್ಠ ರನ್ ಆಗಿತ್ತು. ಉಳಿದಂತೆ ಕರುಣ್ ನಾಯರ್ 4(4), ನಾಯಕ ಅಕ್ಷರ್ ಪಟೇಲ್ 15(13), ಅಶುತೋಷ್ ಶರ್ಮಾ 2(3), ವಿಪ್ರಾಜ್ 12(6) ಹಾಗೂ ಕೊನೆಯಲ್ಲಿ ಅಬ್ಬರಿಸಿ ಸ್ಟಬ್ಸ್ 34(18) ರನ್ ಗಳಿಸಿ ತಂಡದ ಮೊತ್ತ ನೂರೈವತ್ತರ ಗಡಿ ದಾಟಿಸಿದರು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್, ಹೇಜಲ್‌ವುಡ್ ಎರಡು ವಿಕೆಟ್, ಕೃನಾಲ್ ಪಾಂಡ್ಯ ಹಾಗೂ ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ಪಡೆದರು.
ಆರ್‌ಸಿಬಿ ಇನ್ನಿಂಗ್ಸ್: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ದಿಢೀರ್ ಕುಸಿತ ಎದುರಾಯಿತು. ಪಾದಾರ್ಪಣೆ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಸೂಚನೆ ನೀಡಿದ್ದ ಬೆಥೆಲ್ ಕೇವಲ 12(6) ರನ್ ಗಳಿಸಿ ಔಟಾದರು. ಬಳಿಕ ಬಂದ ದೇವ್‌ದತ್ ಪಡಿಕ್ಕಲ್ ಡಕ್‌ಔಟ್ ಆಗಿ ಹೊರನಡೆದರೇ, ನಾಯಕ ಪಾಟೀದರ್ 6(6) ರನ್ ಗಳಿಸಿ ರನ್‌ಔಟ್ ಆಗಿ ಹೊರನಡೆದರು.
ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಉತ್ತಮ ಜೊತೆಯಾಟವಾಡುವ ಮೂಲಕ ಆರ್‌ಸಿಬಿಗೆ ಏಳನೇ ಗೆಲುವು ತಂದುಕೊಟ್ಟರು. ವಿರಾಟ್ ಕೊಹ್ಲಿ 47 ಎಸೆತ ಎದುರಿಸಿ 4 ಬೌಂಡರಿ ಸಹಿತ 51 ರನ್ ಬಾರಿಸಿದರೇ, ಕೃನಾಲ್ ಪಾಂಡ್ಯ ಔಟಾಗದೇ 47 ಎಸೆತ ಎದುರಿಸಿ 5 ಬೌಂಡರಿ, 4 ಸಿಕ್ಸರ್ ಸಹಿತ 73 ರನ್ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇವರಿಗೆ ಟಿಮ್ ಡೇವಿಡ್ 19(5) ಸಾಥ್ ನೀಡಿದರು.
ಡೆಲ್ಲಿ ಪರ ಅಕ್ಷರ್ ಪಟೇಲ್ ಎರಡು, ಚಾಮಿರ ಒಂದು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ: ಕೃನಾಲ್ ಪಾಂಡ್ಯ