ಜೈಪುರ: ಬೇಬಿ ಬಾಸ್ ವೈಭವ್ ಸೂರ್ಯವಂಶಿ ಅವರ ಅಮೋಘ ಶತಕದಾಟ ಹಾಗೂ ಜೈಸ್ವಾಲ್ ಅವರ ಅರ್ಧಶತಕದಾಟದ ಬಲದಿಂದ ಆತೀಥೆಯ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದೆ.
ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ನ 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಸೋತ ಗುಜರಾತ್ ಟೈಟನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 210 ರನ್‌ಗಳ ಗುರಿಯನ್ನು ನೀಡಿತು. ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 15.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ 8 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಗುಜರಾತ್ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್‌ಗೆ ನಾಯಕ ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಉತ್ತಮ ಜೊತೆಯಾಟ ನೀಡಿದರು. ನಾಯಕ ಗಿಲ್ 50 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ 84 ರನ್ ಬಾರಿಸಿದರೇ, ಬಟ್ಲರ್ ಅಜೇಯ 26 ಎಸೆತ ಎದುರಿಸಿ 3 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 50 ರನ್ ಕೆಲಹಾಕಿ ತಂಡ ಬೃಹತ್ ಮೊತ್ತ ಪೇರಿಸಲು ಸಹಕರಿಸಿದರು.
ಉಳಿದಂತೆ ಆರಂಭಿಕ ಬ್ಯಾಟರ್ ಸಾಯ್ ಸುದರ್ಶನ್ 39(30), ವಾಷಿಂಗ್‌ಟನ್ 13(8), ತೆವಾಟಿಯಾ 9(4), ಶಾರುಖ್ ಖಾನ್ ಔಟಾಗದೇ 5(2) ರನ್ ಗಳಿಸಿದರು.
ರಾಜಸ್ಥಾನ್ ಪರ ತೀಕ್ಷಣ ಎರಡು ವಿಕೆಟ್, ಸಂದೀಪ್ ಶರ್ಮಾ ಮತ್ತು ಆರ್ಚರ್ ತಲಾ ಒಂದೊಂದು ವಿಕೆಟ್ ಪಡೆದರು.
ರಾಜಸ್ಥಾನ್ ಇನ್ನಿಂಗ್ಸ್: ಗುಜರಾತ್ ನೀಡಿದ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಭದ್ರ ಬುನಾದಿ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 166 ರನ್‌ಗಳ ಜೊತೆಯಾಟ ನೀಡುವ ಮೂಲಕ ಜಿಟಿ ಗೆಲುವಿನ ಕನಸಿಗೆ ತಣ್ಣೀರೆರೆಚಿದರು.
ಚೊಚ್ಚಲ ಐಪಿಎಲ್ ಶತಕ ದಾಖಲಿಸಿದ ವೈಭವ್ ನೂತನ ದಾಖಲೆಯನ್ನು ಬರೆದರು. ಆರ್‌ಆರ್ ಪರ ಬ್ಯಾಟ್ ಬೀಸಿ ಮೊದಲ ಶತಕ ದಾಖಲಿಸಿದ ಅತೀ ಕಿರಿಯ ಐಪಿಎಲ್ ಆಟಗಾರ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಅತೀ ಕಿರಿಯ ಶತಕ ದಾಖಲಿಸಿದ ಹೆಗ್ಗಳಿಕೆಗೂ ಪಾತ್ರರಾದರು. ವೈಭವ್ ಕೇವಲ 38 ಎಸೆತಗಳಲ್ಲಿ 7 ಬೌಂಡರಿ, 11 ಸಿಕ್ಸರ್ ಸಹಿತ 101 ರನ್ ಬಾರಿಸಿ ಔಟಾದರು. ಬಳಿಕ ಬಂದ ರಾಣಾ 4(2) ರನ್ ಬಾರಿಸಿ ಬಂದ ವೇಗದಲ್ಲೇ ಹಿಂತಿರುಗಿದರು.
ಮತ್ತೊಂದೆಡೆ ಸಮಯೋಚಿತವಾಗಿ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್ ಔಟಾಗದೇ 40 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 70 ರನ್ ಬಾರಿಸಿದರು. 15 ಎಸೆತಗಳಲ್ಲಿ 32 ರನ್ ಚಚ್ಚಿದ ನಾಯಕ ಪರಾಗ್ ಔಟಾಗದೇ ಉಳಿದು ಜೈಸ್ವಾಲ್‌ಗೆ ಸಾಥ್ ನೀಡಿದರು.
ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಹಾಗೂ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ: ವೈಭವ್ ಸೂರ್ಯವಂಶಿ