ಹೈದರಾಬಾದ್: ಆರಂಭಿಕರಾದ ಜೋಸ್ ಬಟ್ಲರ್ (54), ಯಶಸ್ವಿ ಜೈಸ್ವಾಲ್ (54) ಹಾಗೂ ನಾಯಕ ಸಂಜು ಸ್ಯಾಮ್ಸನ್ (55) ಬಿರುಸಿನ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಇಲ್ಲಿ ನಡೆದ ಐಪಿಎಲ್ 2023 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 72 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಕಳೆದ ಬಾರಿದ ರನ್ನರ್-ಅಪ್ ರಾಜಸ್ಥಾನ ತಂಡವು ಶುಭಾರಂಭ ಮಾಡಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡವು ಐದು ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಬಳಿಕ ಯಜುವೇಂದ್ರ ಚಾಹಲ್ (17ಕ್ಕೆ 4) ಹಾಗೂ ಟ್ರೆಂಟ್ ಬೌಲ್ಟ್ (21ಕ್ಕೆ 2) ದಾಳಿಗೆ ತತ್ತರಿಸಿದ ಹೈದರಾಬಾದ್ ಎಂಟು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ರಾಜಸ್ಥಾನ ಪರ ಆರಂಭಿಕರಾದ ಬಟ್ಲರ್ ಹಾಗೂ ಜೈಸ್ವಾಲ್ ಮೊದಲ ವಿಕೆಟ್‌ಗೆ 35 ಎಸೆತಗಳಲ್ಲೇ 85 ರನ್‌ಗಳ ಜೊತೆಯಾಟ ಕಟ್ಟಿದರು. ಕೇವಲ 22 ಎಸೆತಗಳನ್ನು ಎದುರಿಸಿದ ಬಟ್ಲರ್ 54 ರನ್ (7 ಬೌಂಡರಿ, 3 ಸಿಕ್ಸರ್) ಗಳಿಸಿ ಅಬ್ಬರಿಸಿದರು.
ಮತ್ತೊಂದೆಡೆ ಜೈಸ್ವಾಲ್ 37 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದ 54 ರನ್ ಗಳಿಸಿದರು.
ನಾಯಕನ ಆಟವಾಡಿದ ಸಂಜು 32 ಎಸೆತಗಳಲ್ಲಿ 55 ರನ್ (4 ಸಿಕ್ಸರ್, 3 ಬೌಂಡರಿ) ಗಳಿಸಿ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ನೆರವಾದರು. ಶಿಮ್ರಾನ್ ಹೆಟ್ಮೆಯರ್ 16 ಎಸೆತಗಳಲ್ಲಿ 22 ರನ್ ಗಳಿಸಿ ಔಟಾಗದೆ ಉಳಿದರು.
ಹೈದರಾಬಾದ್ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ (0) ಮಯಂಕ್ ಅಗರವಾಲ್ (27), ರಾಹುಲ್ ತ್ರಿಪಾಠಿ (0), ಹ್ಯಾರಿ ಬ್ರೂಕ್ (13), ವಾಷಿಂಗ್ಟನ್ ಸುಂದರ್ (1), ಗ್ಲೆನ್ ಪಿಲಿಪ್ಸ್ (8) ವೈಫಲ್ಯ ಅನುಭವಿಸಿದರು.
ಕೊನೆಯ ಹಂತದಲ್ಲಿ ಅಬ್ದುಲ್ ಸಮದ್ ಔಟಾಗದೆ 32 ರನ್ ಹಾಗೂ ಉಮ್ರಾನ್ ಮಲಿಕ್ ಅಜೇಯ 19 ರನ್ ಗಳಿಸಿದರು.