ಗುವಾಹಟಿ : ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ದಕ್ಷಿಣ ಆಫ್ರಿಕಾ ತಂಡದ ಕನಸು ಕೊನೆಗೂ ಈಡೇರಿದೆ. ಅದು ಕೂಡ ಬರೋಬ್ಬರಿ ೨೬ ವರ್ಷಗಳ ಬಳಿಕ. ಅಂದರೆ ೧೯೯೯ರ ಬಳಿಕ ದಕ್ಷಿಣ ಆಫ್ರಿಕಾ ಒಮ್ಮೆಯೂ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿರಲಿಲ್ಲ. ಈ ಬಾರಿ ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಟೆಂಬಾ ಬವುಮಾ ಪಡೆ ಹೊಸ ಇತಿಹಾಸ ನಿರ್ಮಿಸಿದೆ.
ಗುವಾಹಟಿಯಲ್ಲಿ ನಡೆದ ಭಾರತದ ವಿರುದ್ಧದ ೨ನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ೪೦೮ ರನ್‌ಗಳ ಅಮೋಘ ಜಯ ಸಾಽಸಿದೆ. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ ೨-೦ ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಕೊಲ್ಕತ್ತಾದಲ್ಲಿ ನಡೆದ ಈ ಸರಣಿಯ ಮೊದಲ ಮ್ಯಾಚ್‌ನಲ್ಲಿ ಸೌತ್ ಆಫ್ರಿಕಾ ತಂಡ ೩೦ ರನ್‌ಗಳ ಜಯ ಸಾಽಸಿತ್ತು. ಇದೀಗ ಗುವಾಹಟಿಯಲ್ಲೂ ಭಾರತ ತಂಡವನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ. ಈ ಫಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ ೪೮೯ ರನ್ ಕಲೆಹಾಕಿದ್ದರು.
ಇದನ್ನು ಓದಿ: ಅಂಧರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ
ಇದಕ್ಕುತ್ತರವಾಗಿ ಪ್ರಥಮ ಇನ್ನಿಂಗ್ಸ್ ಆಡಿದ ಟೀಮ್ ಇಂಡಿಯಾ ಕಲೆಹಾಕಿದ್ದು ಕೇವಲ ೨೦೧ ರನ್‌ಗಳು ಮಾತ್ರ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ೨೮೮ ರನ್‌ಗಳ ಹಿನ್ನಡೆ ಅನುಭವಿಸಿತು.
೨೮೮ ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ೫ ವಿಕೆಟ್ ನಷ್ಟಕ್ಕೆ ೨೬೦ ರನ್‌ಗಳಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಭಾರತ ತಂಡಕ್ಕೆ ಕೊನೆಯ ಇನ್ನಿಂಗ್ಸ್‌ನಲ್ಲಿ ೫೪೯ ರನ್‌ಗಳ ಕಠಿಣ ಗುರಿ ನೀಡಿದ್ದರು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯದ ವೇಳೆ ಕೆಎಲ್ ರಾಹುಲ್ (೬) ಹಾಗೂ ಯಶಸ್ವಿ ಜೈಸ್ವಾಲ್ (೧೩) ಅವರ ವಿಕೆಟ್ ಕಳೆದುಕೊಂಡಿತು. ಇನ್ನು ಐದನೇ ದಿನದಾಟದ ಆರಂಭದಲ್ಲೇ ಕುಲ್ದೀಪ್ ಯಾದವ್ (೫) ಔಟಾದರು. ಇದರ ಬೆನ್ನಲ್ಲೇ ಧ್ರುವ್ ಜುರೆಲ್ (೨) ಕೂಡ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ರಿಷಭ್ ಪಂತ್ ೧೩ ರನ್ ಬಾರಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರಿಸಿದ ರವೀಂದ್ರ ಜಡೇಜಾ ೫೪ ರನ್ ಬಾರಿಸಿದರು. ಆದರೆ ಅಂತಿಮವಾಗಿ ೧೪೦ ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ ೪೦೮ ರನ್‌ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ೨೬ ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿದೆ.




