ಕೌಲಾಲಂಪುರ್: 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಭಾರತದ ಉದಯೋನ್ಮುಖ ಆಟಗಾರ್ತಿಯರು ಈ ಟೂರ್ನಿಯಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಕಾತರರಾಗಿದ್ದಾರೆ.
2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲಿ ಭಾರತ ತಂಡವು ಚಾಂಪಿಯನ್ ಆಗಿತ್ತು. ಈ ಬಾರಿಯೂ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ.
ಭಾನುವಾರ ಬೇಯುಮಾಸ್ ಓವೆಲ್‌ನಲ್ಲಿ ಭಾರತದ ವನಿತೆಯರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಪಾಲಿನ ಮೊದಲ ಪಂದ್ಯ ಆಡುವ ಮೂಲಕ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ಭಾರತ ತಂಡ ಈ ಸಲ ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಅತಿಥೇಯ ಮಲೇಷ್ಯಾ ತಂಡಗಳೊಂದಿಗೆ ʼಎʼ ಗುಂಪಿನಲ್ಲಿದೆ.
ಈ ಟೂರ್ನಿಯಲ್ಲಿ 16 ತಂಡಗಳು ಕಣದಲ್ಲಿದ್ದು, 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಫೆಬ್ರವರಿ.2ರಂದು ಫೈನಲ್ ನಡೆಯಲಿದೆ.
ಈ ಬಾರಿ ಕರ್ನಾಟಕದ ನಿಕಿ ಪ್ರಸಾದ್ ಭಾರತ ಮಹಳಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಶೆಫಾಲಿ ವರ್ಮಾ ತಂಡದ ನಾಯಕಿಯಾಗಿದ್ದರು.
ಭಾರತ ಮಹಿಳಾ ತಂಡ: ನಿಕಿ ಪ್ರಸಾದ್(ನಾಯಕಿ), ಸನಿಕಾ ಚಾಲ್ಕೆ (ಉಪನಾಯಕಿ), ಜಿ.ತ್ರಿಷಾ, ಕಮಲಿನಿ ಜಿ (ವಿಕೆಟ್ ಕೀಪರ್), ಭಾವಿಕಾ ಅಹಿರೆ (ವಿಕೆಟ್ ಕೀಪರ್), ಐಶ್ವರಿ ಅವಸರೆ, ಮಿಥಿಲಾ ವಿನೋದ್, ವಿ.ಜೆ. ಜೋಶಿತಾ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಅನಂದಿತಾ ಕಿಶೋರ್, ಎಂ.ಡಿ.ಶಬ್ನಮ್, ವೈಷ್ಣವಿ ಎಸ್.