Mysore
22
broken clouds
Light
Dark

ICC t20 worldcup 2024: ಬಾಂಗ್ಲಾದೇಶವನ್ನು ಬಗ್ಗುಬಡಿದ ಭಾರತ; ಸೆಮಿಸ್‌ ಆಸೆ ಜೀವಂತ

ಅಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಗ್ರೂಪ್‌-8ರ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 50 ರನ್‌ಗಳ ಅಂತರದಿಂದ ಬಗ್ಗುಬಡಿಯಿತು. ಆ ಮೂಲಕ ಸೆಮಿಸ್‌ಗೆ ನೇರ ಅರ್ಹತೆ ಪಡೆದುಕೊಂಡಿತು.

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 196 ರನ್‌ ಕೆಲಹಾಕಿ ಎದುರಾಳಿ ತಂಡಕ್ಕೆ 197 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿತು. ಈ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ಕುಲ್ದೀಪ್‌ ಯಾದವ್‌ ಸ್ಪಿನ್‌ ಮೋಡಿಗೆ ಬಲಿಯಾಗುವ ಮೂಲಕ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿ 50 ರನ್‌ಗಳ ಅಂತರದಿಂದ ಸೋಲನುಭವಿಸಿತು.

ಭಾರತ ಇನ್ನಿಂಗ್ಸ್‌: ಸೂಪರ್‌-8ರ ಗ್ರೂಪ್‌ ಹಂತದ ಮಹತ್ವದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭ ಸಿಕ್ಕಿತು. ನಾಯಕ ರೋಹಿತ್‌ ಶರ್ಮಾ 23(11)ರನ್‌, ವಿರಾಟ್‌ ಕೊಹ್ಲಿ 37(28)ರನ್‌ ಗಳಿಸಿ ಔಟಾದರು. ಬಳಿಕ ಬಂದ ರಿಷಭ್‌ ಪಂತ್‌ 36(24)ರನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ 6(2)ರನ್‌ ಕಲೆಹಾಕಿ ಬೇಗನೆ ನಿರ್ಗಮಿಸಿದರು.

ತಂಡ ಸಂಕಷ್ಟದಲ್ಲಿದ್ದಾಗ ಶಿವಂ ದುಬೆ ಹಾಗೂ ಉಪ ನಾಯಕ ಹಾರ್ದಿಕ್‌ ಪಾಂಡ್ಯ ಜೊತೆಯಾಗಿ ಚೇತರಿಕೆಯ ಇನ್ನಿಂಗ್ಸ್‌ ಕಟ್ಟಿದರು. ಶಿವಂ ದುಬೆ 34(24)ರನ್‌ ಗಳಿಸಿದರೆ, ಹಾರ್ದಿಕ್‌ ಪಾಂಡ್ಯ ಔಟಾಗದೇ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 50 ರನ್‌ ಗಳಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 3(5) ರನ್‌ ಗಳಿಸಿದರು.

ಬಾಂಗ್ಲಾದೇಶದ ಪರ ಹಸನ್‌ ಶಕೀಬ್‌ ಹಾಗೂ ರಿಷಾದ್‌ ಹೊಸೇನ್‌ ತಲಾ ಎರಡೆರೆಡು ವಿಕೆಟ್‌ ಕಬಳಿಸಿದರು. ಶಕೀಬ್‌ ಅಲ್‌-ಹಸನ್‌ ಒಂದು ವಿಕೆಟ್‌ ಪಡೆದರು.

ಬಾಂಗ್ಲಾದೇಶ ಇನ್ನಿಂಗ್ಸ್‌: ಟೀಂ ಇಂಡಿಯಾ ನೀಡಿದ ಬೃಹತ್‌ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತ ಎದುರಾಯಿತು. ಲಿಟನ್‌ ದಾಸ್‌ 13(10)ರನ್‌ ಗಳಿಸಿ ಬೇಗನೇ ಔಟಾದರು. ತಂಝೀದ್ ಹಸನ್‌ 29(31) ಮಂದಗತಿಯ ಆಟವಾಡಿ ನಿರ್ಗಮಿಸಿದರು.

ನಾಯಕ ನಜ್ಮುಲ್ ಹುಸೇನ್ ಸ್ಯಾಂಟೋ 40(32) ರನ್‌ ಹೊರತಾಗಿ ಬೇರಾರಿಂದಲೂ ಉತ್ತಮ ಇನ್ನಿಂಗ್ಸ್‌ ಕಂಡು ಬರಲಿಲ್ಲ. ಉಳಿದಂತೆ ಹೃದಯ್‌ 4(6) ರನ್‌, ಶಕೀಬ್‌ ಅಲ್-ಹಸನ್‌ 11(7) ರನ್‌, ಮಹ್ಮದುಲ್ಲಾ 13(15)ರನ್‌, ಜಾಕೇರ್‌ ಅಲಿ 1(4) ರನ್‌, ರಶೀದದ ಹೊಸೇನ್‌ 24(10) ರನ್‌, ಮೆಹದಿ ಹಸನ್‌ ಹಾಗೂ ತಂಝೀಮ್‌ ಹಸನ್‌ ಔಟಾಗದೇ ತಲಾ 5 ಹಾಗೂ ಒಂದು ರನ್‌ ಕಲೆ ಹಾಕಿದರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

ಟೀಂ ಇಂಡಿಯಾ ಪರ ಕುಲ್ದಿಪ್‌ ಯಾದವ್‌ 3, ಅರ್ಷ್‌ದೀಪ್‌ ಹಾಗೂ ಬುಮ್ರಾ ತಲಾ ಎರಡು ಮತ್ತು ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.