ನವದೆಹಲಿ : 17 ವರ್ಷದ ಡಿ. ಗುಕೇಶ್ ಅಂತಾರಾಷ್ಟ್ರೀಯ ಚೆಸ್‌ನ ಲೈವ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ದಿಗ್ಗಜ ವಿಶ್ವನಾಥನ್ ಆನಂದ್‌ರನ್ನು ಹಿಂದಿಕ್ಕಿ ಭಾರತದ ನಂ.1 ಆಟಗಾರ ಎನಿಸಿದ್ದಾರೆ.
ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ 2ನೇ ಸುತ್ತಿನಲ್ಲಿ ಸ್ಥಳೀಯ ಆಟಗಾರ ಇಸ್ಕ್ಯಾನ್ಡರೊವ್ ವಿರುದ್ದ ಗೆಲುವು ಸಾಧಿಸಿ 2.5 ರೇಟಿಂಗ್ ಅಂಕಗಳನ್ನು ಗಳಿಸಿದರು. ಇದರೊಂದಿಗೆ ಗುಕೇಶ್‌ರ ಲೈವ್ ರೇಟಿಂಗ್ 2755.9 ಅಂಕಕ್ಕೆ ಏರಿಕೆಯಾಗಿದ್ದು, ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೇರಿದ್ದಾರೆ. ಆನಂದ್ 2754.0 ಅಂಕ ಹೊಂದಿದ್ದು, ಒಂದು ಸ್ಥಾನ ಇಳಿಕೆ ಕಂಡು 10ನೇ ಸ್ಥಾನ ಪಡೆದಿದ್ದಾರೆ.
1991ರ ಜುಲೈನಲ್ಲಿ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಪಟ್ಟಿಗೆ ಸೇರ್ಪಡೆಗೊಂಡಿದ್ದ ವಿಶ್ವನಾಥನ್ ಆನಂದ್, 1987ರ ಜನವರಿಯಿಂದಲೂ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನಂ.1 ಆಟಗಾರನಾಗಿ ಮುಂದುವರೆದಿದ್ದರು. ಡಿ ಗುಕೇಶ್ ಮುಂದಿನ ರ‍್ಯಾಂಕಿಂಗ್ ಪಟ್ಟಿ ಪ್ರಕಟಗೊಳ್ಳುವವರೆಗೂ(ಸೆ.01) ರೇಟಿಂಗ್ ಕಾಯ್ದುಕೊಂಡರೆ, 1986ರಲ್ಲಿ ಪ್ರವೀಣ್ ಥಿಪ್ಸೆ ಬಳಿಕ ಆನಂದ್‌ಗಿಂತ ಉತ್ತಮ ರ‍್ಯಾಂಕಿಂಗ್ ಪಡೆದ ಮೊದಲ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.