ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ (SUFC) ವತಿಯಿಂದ ಪ್ರಥಮ ಆವೃತ್ತಿಯ ಇಂಟರ್-ಸಿಟಿ ಫುಟ್ಬಾಲ್ ಟೂರ್ನಮೆಂಟನ್ನು ಇದೇ ತಿಂಗಳ ಜ.11 ಮತ್ತು 12 ರಂದು ನಗರದ ಹಲಸೂರಿನ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ.
ಉದಯೋನ್ಮುಖ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ನ ಬೆಂಗಳೂರು ಮತ್ತು ಪುಣೆ ಕೇಂದ್ರಗಳಿಂದ 6 ವಯೋಮಾನದ ವಿಭಾಗಗಳಲ್ಲಿ (U-7, U-9, U-11 U-13, U-15, U-17) 250ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ.
ಈ ಪಂದ್ಯಾವಳಿ ಎರಡು ದಿನಗಳ ಕಾಲ ನಡೆಯಲಿದ್ದು, ಮೊದಲ ದಿನ ರೌಂಡ್-ರಾಬಿನ್, ಎರಡನೇ ದಿನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಜೊತೆಗೆ ಯುವ ಆಟಗಾರರು ಸ್ಪೋರ್ಟಿಂಗ್ ಡೈರೆಕ್ಟರ್ ಟೆರಿ ಫಿಲನ್ ಅವರನ್ನು ಭೇಟಿ ಮಾಡಿ, ಕ್ಲಬ್‌ನ ಹಿರಿಯ ಆಟಗಾರರೊಂದಿಗೆ ಸಂವಹನ ನಡೆಯಲಿದೆ. ಜ.11ರಂದು ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಬೆಂಗಳೂರು ಎಫ್‌ಸಿ ಮತ್ತು ಮೊಹಮ್ಮದನ್ ಎಸ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್(ISL) ಪಂದ್ಯ ಕೂಡ ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರಿಗೆ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗುವ ಅವಕಾಶವಿದೆ. ಈ ಮೂಲಕ ತಳಮಟ್ಟದ ಮತ್ತು ವೃತ್ತಿಪರ ಅಭಿವೃದ್ದಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಹಾಗೂ ಆಟಗಾರರ ಪ್ರಗತಿಗೆ ಸ್ಪಷ್ಟವಾದ ಮಾರ್ಗವನ್ನು ಒದಗಿಸಲು ತರಬೇತಿ ಕಲ್ಪಿಸುವುದಾಗಿದೆ.
ಪಂದ್ಯಾವಳಿ ಆಯೋಜನೆ ಬಗ್ಗೆ ಮಾಹಿತಿ ನೀಡಿದ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ನ ಸಿಇಒ ಪ್ರಣವ್ ಟ್ರೆಹಾನ್, ಎಸ್‌ಯುಎಫ್‌ಸಿ ಇಂಟರ್-ಸಿಟಿ ಟೂರ್ನಮೆಂಟ್ ಭಾರತದಲ್ಲಿ ತಳಮಟ್ಟದ ಫುಟ್‌ಬಾಲ್ ಆಟಗಾರರನ್ನು ಪ್ರೋತ್ಸಾಹಿಸಿಸುವುದಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ಯುವ ಆಟಗಾರರಿಗೆ ಪಂದ್ಯದ ಅನುಭವವನ್ನು ಪಡೆಯಲು ಮತ್ತು ಚಿಕ್ಕ ವಯಸ್ಸಿನಿಂದಲೇ ತಂತ್ರಗಳನ್ನು ಕಲಿಯಲು ಅವಕಾಶಗಳನ್ನು ಸೃಷ್ಟಿಸುವುದಾಗಿದೆ ಎಂದರು.
ಪ್ರತಿಭಾವಂತ ಕ್ರೀಡಾಪಟುಗಳ ಉಜ್ವಲ ಭವಿಷ್ಯಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸುವ ಅತ್ಯುತ್ತಮ ಫುಟ್‌ಬಾಲ್, ಶಿಕ್ಷಣ ಮತ್ತು ಸಮುದಾಯ-ನಿರ್ಮಾಣವನ್ನು ಒಟ್ಟುಗೂಡಿಸುವ ವೇದಿಕೆಯನ್ನು ಒದಗಿಸಲು ನಾವು ಉತ್ಸುಕರಾಗಿದ್ದೇವೆ.
ಪಂದ್ಯಾವಳಿಯ ಭಾಗವಾಗಿ, SUFCಯ ಮುಖ್ಯ ಸ್ಕೌಟ್ ಮತ್ತು ವಿಶ್ಲೇಷಕ, ಇಂದ್ರೇಶ್ ನಾಗರಾಜನ್ ಆಟಗಾರರಿಗೆ ವಿಶೇಷ ಕಾರ್ಯಗಾರವನ್ನು ನಡೆಸಲಿದ್ದು, ವೀಡಿಯೊ ವಿಶ್ಲೇಷಣೆಯನ್ನು ಬಳಸಿಕೊಂಡು ಪ್ರಮುಖ ಫುಟ್‌ಬಾಲ್ ಪರಿಕಲ್ಪನೆಗಳನ್ನು ಅರ್ಥಮಾಡಿಸಲಿದ್ದಾರೆ. ಈ ಕಾರ್ಯಾಗಾರವು ಆಟಗಾರರ ವೀಕ್ಷಣೆ, ಪ್ರತಿಬಿಂಬ ಮತ್ತು ಕಾರ್ಯಕ್ಷಮತೆಯ ಕೌಶಲ್ಯಗಳನ್ನು ಸುಧಾರಿಸುವ ಮೂಲಕ ಅವರ ಕಲಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಹೇಳಿದರು.