ಮೆಲ್ಬರ್ನ್ : ಚುಟುಕು ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ಬ್ಯಾಟರ್ ಮತ್ತು ನಾಯಕ ಎನಿಸಿರುವ ಆ್ಯರನ್ ಫಿಂಚ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ ನಿವೃತ್ತಿ ಪ್ರಕಟಿಸಿದ್ದಾರೆ.
ಆಸ್ಟ್ರೇಲಿಯಾದ ಬಿಗ್‌ಬ್ಯಾಷ್ ಲೀಗ್ ಮತ್ತು ಇತರ ದೇಶಗಳಲ್ಲಿ ನಡೆಯುವ ಟಿ20 ಲೀಗ್‌ಗಳಲ್ಲಿ ಇನ್ನಷ್ಟು ವರ್ಷ ಆಟ ಮುಂದುವರಿಸಲು ನಿರ್ಧರಿಸಿದ್ದಾರೆ.
‘ಟಿ20ಯಲ್ಲಿ ನಮಗೆ ವಿಶ್ವಕಪ್ ಗೆದ್ದುಕೊಟ್ಟ ಮತ್ತು ಸುದೀರ್ಘ ಅವಧಿಯವರೆಗೆ ತಂಡವನ್ನು ಮುನ್ನಡೆಸಿದ್ದ ನಾಯಕ ತಮ್ಮ ವೃತ್ತಿಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಆ್ಯರನ್ ಫಿಂಚ್ ಅವರಿಗೆ ಧನ್ಯವಾದಗಳು’ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಫಿಂಚ್ ಅವರ ನಿವೃತ್ತಿ ನಿರ್ಧಾರ ನಿರೀಕ್ಷಿತವೇ ಆಗಿತ್ತು. ಐದು ಟೆಸ್ಟ್‌ಗಳಲ್ಲಿ ಆಡಿದ್ದ ಅವರಿಗೆ 2018ರ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ಫಾರ್ಮ್ ಕಳೆದುಕೊಂಡ ಕಾರಣ ಕಳೆದ ವರ್ಷ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.
ದುಬೈನಲ್ಲಿ 2021 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ತಂಡವನ್ನು ಟ್ರೋಫಿಯತ್ತ ಮುನ್ನಡೆಸಿದ್ದರು. ಆಸ್ಟ್ರೇಲಿಯಾ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಗೆದ್ದಿತ್ತು.
ಆದರೆ ಕಳೆದ ವರ್ಷ ತವರು ನೆಲದಲ್ಲಿ ನಡೆದಿದ್ದ ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ಫಿಂಚ್ ನಾಯಕತ್ವದ ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು.