ಜಗತ್ತಿನ ಪ್ರಸಿದ್ಧ ಸರ್ಜ್ ಎಂಜಿನ್ ಆಗಿರುವ ಗೂಗಲ್ ಈ ವರ್ಷದ ಮೂಲಕ ತನ್ನ 25 ವರ್ಷಗಳ ಸೇವೆಯನ್ನು ಪೂರೈಸಿದ್ದು, ಈ ವಿಶೇಷ ವಾರ್ಷಿಕೋತ್ಸವದ ವೇಳೆ ವಿಡಿಯೊವೊಂದನ್ನು ಹಂಚಿಕೊಂಡಿದೆ. ಕಳೆದ 25 ವರ್ಷಗಳಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳು, ವಿಷಯಗಳು ಹಾಗೂ ವಸ್ತುಗಳನ್ನು ಬಿಚ್ಚಿಟ್ಟಿದೆ.
ವಿವಿಧ ವಿಭಾಗಗಳಲ್ಲಿ ಯಾರನ್ನು ಹೆಚ್ಚಾಗಿ ನೆಟ್ಟಿಗರು ಹುಡುಕಿದ್ದಾರೆ ಎಂಬುದು ಬಹಿರಂಗವಾಗಿದ್ದು, ಗೂಗಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. 3 ನಿಮಿಷ 48 ಸೆಕೆಂಡುಗಳ ವಿಡಿಯೊ ಇದಾಗಿದ್ದು, ರೊನಾಲ್ಡೊ ಅತಿಹೆಚ್ಚು ಹುಡುಕಲ್ಪಟ್ಟ ಫುಟ್‌ಬಾಲರ್, ಅತಿಹೆಚ್ಚು ಹುಡುಕಾಡಿದ ಆನಿಮೇಷನ್ ಪೊಕಿಮಾನ್, ಅತಿಹೆಚ್ಚು ಹುಡುಕಲ್ಪಟ್ಟ ಮ್ಯೂಸಿಕ್ ಬ್ಯಾಂಡ್ ಬಿಟಿಎಸ್, ಅತಿಹೆಚ್ಚು ಹುಡುಕಲ್ಪಟ್ಟ ಗೊಂಬೆ ಬಾರ್ಬಿ, ಅತಿಹೆಚ್ಚು ಹುಡುಕಲ್ಪಟ್ಟ ಸೂಪರ್ ಹೀರೊ ಸ್ಪೈಡರ್‌ಮ್ಯಾನ್, ಅತಿಹೆಚ್ಚು ಹುಡುಕಲ್ಪಟ್ಟ ಹೋರಾಟ ʼಬ್ಲಾಕ್ ಲಿವ್ಸ್ ಮ್ಯಾಟರ್ಸ್ʼ, ಅತಿಹೆಚ್ಚು ಹುಡುಕಲ್ಪಟ್ಟ ವಿಜ್ಞಾನಿ ಐನ್‌ಸ್ಟೈನ್ ಎಂದು ಗೂಗಲ್ ತಿಳಿಸಿದೆ.





