Mysore
23
overcast clouds
Light
Dark

ಜೆಪಿ ಸರ್ವೋದಯ ಚಳವಳಿ ಪುನರಾವಲೋಕನ ಅಗತ್ಯ

ಆರ್.ಟಿ.ವಿಠಲಮೂರ್ತಿ
Ph: 9448090990
Email: rtv1967@gmail.com

ಸುಮಾರು ಐವತ್ತು ವರ್ಷಗಳ ಹಿಂದೆ ನಡೆದ ಈ ಹೋರಾಟವನ್ನು ಇವತ್ತು ಸಾಂಕೇತಿಕವಾಗಿಯಾದರೂ ಗಮನಿಸಬೇಕಿದೆ.

ಏಕೆಂದರೆ ಇಂತಹ ಹೋರಾಟ ಪುನಃ ಈ ನೆಲದಲ್ಲಿ ನಡೆಯುತ್ತದೆ ಎಂಬ ನಂಬಿಕೆ ಬರುತ್ತಿಲ್ಲ. ಹೀಗಾಗಿ ಭಾರತದ ಇತಿಹಾಸ ಇಂತಹದೊಂದು ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಿತ್ತು ಕಾರಣಕ್ಕಾಗಿಯಾದರೂ ಇದನ್ನು ಪುನರಾವಲೋಕನ ಮಾಡಬೇಕು.
ಅಂದ ಹಾಗೆ ಇಂತಹ ಹೋರಾಟಕ್ಕೆ ಚಾಲನೆ ನೀಡಿದವರು ಜಯಪ್ರಕಾಶ್ ನಾರಾಯಣ್. ಅವತ್ತು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಜಾರಿಗೆ ತಂದ ತುರ್ತುಸ್ಥಿತಿಯ ವಿರುದ್ಧ ಧ್ವನಿಯೆತ್ತಿದ ಜಯಪ್ರಕಾಶ್ ನಾರಾಯಣ್ ಅವರ ಸರ್ವೋದಯ ಚಳವಳಿ ಇಡೀ ದೇಶವನ್ನು ಆವರಿಸಿತು.

ಅಂತಿಮವಾಗಿ ಸ್ವಾತಂತ್ರೋತ್ತರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ಕಾರಣವಾಯಿತು. ಮುಂದೆ ದೇಶದ ಬಹುತೇಕ ರಾಜ್ಯಗಳಲ್ಲಿ ಅದು ಪುನರಾವರ್ತನೆಯಾಯಿತು.

ಇಂದಿರಾಗಾಂಧಿ ವಿರುದ್ಧ ನಡೆದ ಈ ಹೋರಾಟದ ಸಂದರ್ಭದಲ್ಲಿ ಪದೇ ಪದೇ ಕಿವಿಗೆ ಬೀಳುತ್ತಿದ್ದ ಒಂದು ವಿಷಯವೆಂದರೆ ವಂಶಪಾರಂಪರ್ಯ ರಾಜಕಾರಣ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮ್ಮ ಪುತ್ರಿ ಇಂದಿರಾ ಗಾಂಧಿ ಅವರನ್ನು ರಾಜಕೀಯಕ್ಕೆ ತಂದ ಬಗೆ ಮತ್ತು ಅದನ್ನು ಇಂದಿರಾ ಗಾಂಧಿ ಬಳಸಿಕೊಂಡ ಬಗೆ ಅವತ್ತಿನ ಈ ಹೋರಾಟ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿತು.

ಅರ್ಥಾತ್, ವಂಶಪಾರಂಪರ್ಯ ರಾಜಕಾರಣ ಪ್ರಜಾಪ್ರಭುತ್ವದ ಸಂಕೇತವಲ್ಲ. ಬದಲಿಗೆ ರಾಜಸತ್ತೆಯ ಸಂಕೇತ ಎಂಬ ಭಾವನೆ ಧ್ವನಿಯಲ್ಲಿತ್ತು. ಮತ್ತು ದೇಶದ ಜನ ಕೂಡ ಇಂತಹ ಧ್ವನಿಗೆ ಬಲ ನೀಡಿದರು. ಚಾರಿತ್ರಿಕ ಬದಲಾವಣೆಗೆ ಕಾರಣರಾದರು.

ಚೋದ್ಯವೆಂದರೆ ಸುಮಾರು ಐವತ್ತು ವರ್ಷಗಳಾದ ನಂತರ ಸರ್ವೋದಯ ಚಳವಳಿಯ ಆಶಯ ಎಂಬುದು ನೆಲದಲ್ಲಿ ಹೂತುಹೋಗಿ ಬಹುಕಾಲವೇ ಆಗಿಹೋಗಿದೆ. ಹಾಗಾಗಿ ವಂಶಪಾರಂಪರ್ಯ ರಾಜಕಾರಣ ಎಂಬುದು ಇವತ್ತು ದೊಡ್ಡ ಸಂಗತಿಯೇ ಅಲ್ಲ.

ಅವತ್ತು ಯಾರು ಸರ್ವೋದಯ ಚಳವಳಿಗೆ ಧ್ವನಿಯಾಗಿ ಬೆಳೆದು ನಿಂತರೋ ಅಂತಹವರೇ ಮುಂದೆ ರಾಜ್ಯ ಮಟ್ಟದಲ್ಲಿ ಪ್ರಬಲ ಶಕ್ತಿಗಳಾಗಿ ತಮ್ಮದೇ ಪಾಳೆಯಪಟ್ಟುಗಳನ್ನು ರಚಿಸಿಕೊಂಡರು. ನೋಡ ನೋಡುತ್ತಿ ದ್ದಂತೆಯೇ ಇಂತಹವರೇ ತಮ್ಮ ಮಕ್ಕಳು, ಸಂಬಂಧಿಕರನ್ನು ರಾಜಕೀಯವಾಗಿ ಮೇಲೆತ್ತುತ್ತಾ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಮಾಡುವ ಹಕ್ಕಿದೆ ಎನ್ನತೊಡಗಿದರು.

ಪರಿಣಾಮವಾಗಿ ಲೋಕಸಭೆ ಚುನಾವಣೆ ಘೋಷಣೆಯಾದ ಈ ಹೊತ್ತಿನಲ್ಲಿ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡುವ ಶಕ್ತಿಯನ್ನು ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಕಳೆದುಕೊಂಡುಬಿಟ್ಟಿವೆ. ಇದಕ್ಕೆ ಬೆರಳೆಣಿಕೆಯಷ್ಟು ಅಪವಾದಗಳು ಇರಬಹುದಾದರೂ ಒಟ್ಟಾರೆಯಾಗಿ ನೋಡಿದರೆ ಭಾರತದ ರಾಜಕಾರಣ ವಂಶಪರಂಪರೆಯ ನೆಲೆಗಟ್ಟಿನ ಮೇಲೆ ಸೆಟ್ಲಾಗಿ ಹೋಗಿದೆ.

ಉದಾಹರಣೆಗೆ ಕರ್ನಾಟಕವನ್ನೇ ತೆಗೆದುಕೊಂಡು ನೋಡಿ. ಇಲ್ಲಿ ಕಣಕ್ಕಿಳಿದಿರುವ ಬಿಜೆಪಿ- ಜಾತ್ಯತೀತ ಜಾತ್ಯತೀತ ಜನತಾದಳ ಮೈತ್ರಿಕೂಟವೇ ಇರಬಹುದು, ಕಾಂಗ್ರೆಸ್ ಪಕ್ಷವೇ ಇರಬಹುದು. ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷಗಳ ಟಿಕೆಟ್ ಪಡೆಯಲು ವಂಶಪರಂಪರೆಯೇ ಬಹುಮುಖ್ಯ ಮಾನದಂಡದಂತಾಗಿ ಹೋಗಿದೆ.

ಕೇಳಿದರೆ, ತಮಗೆ ಇದನ್ನು ಹೊರತುಪಡಿಸಿ ಪರ್ಯಾಯ ಮಾರ್ಗಗಳು ಕಡಿಮೆ ಎಂಬ ಮಾತು ಕೇಳಿ ಬರುತ್ತವೆ. ಕಳೆದ ತಿಂಗಳು ನಡೆದ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಮುಂಬಯಿ-ಕರ್ನಾಟಕ ಭಾಗದ ಜಿಲ್ಲೆಯೊಂದರ ನಾಯಕರು ಸಭೆ ಸೇರಿದ್ದರು.

ಈ ಸಭೆಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿಯೊಬ್ಬರು: ಈ ಸಲ ನಮ್ಮ ಭಾಗದ ಎರಡು ಜಿಲ್ಲೆಗಳಿಂದ ಸಚಿವರ ಮಕ್ಕಳೇ ಪಕ್ಷದ ಅಭ್ಯರ್ಥಿಗಳಾಗಲಿ ಎಂದು ಸಲಹೆ ನೀಡಿದರು. ಅಷ್ಟೇ ಅಲ್ಲ, ಟಿಕೆಟ್‌ಗಾಗಿ ಹೋರಾಟ ನಡೆಸುತ್ತಿದ್ದ ಸ್ಥಳೀಯ ನಾಯಕರೊಬ್ಬರ ಬಳಿ: ನೀವು ಕಷ್ಟಪಟ್ಟು ದುಡಿದಿರುವ ಐದಾರು ಕೋಟಿ ರೂಪಾಯಿಗಳನ್ನು ಚುನಾವಣೆಗೆ ನಿಂತು ಕಳೆದುಕೊಳ್ಳಬೇಡಿ. ಬರಿ ಕಳೆದುಕೊಳ್ಳುವುದಲ್ಲ, ನಾಳೆ ಸಾಲಗಾರರಾಗಿ ಪರದಾಡಬೇಡಿ ಎಂದರಂತೆ. ಈ ಘಟನೆಯನ್ನು ಇವತ್ತಿನ ಸ್ಥಿತಿಗೆ ರೂಪಕವನ್ನಾಗಿ ಪರಿಗಣಿಸಬಹುದು. ಅರ್ಥಾತ್, ಇವತ್ತಿನ ಸ್ಥಿತಿಯಲ್ಲಿ ಜನಪರ ಕಾಳಜಿ ಇರುವ, ಜನರಿಗಾಗಿ ಕೆಲಸ ಮಾಡುವ ಆಕಾಂಕ್ಷೆ ಇರುವ ವ್ಯಕ್ತಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವುದು ಅಸಂಭವವಾಗುತ್ತಿದೆ ಎಂಬುದಕ್ಕೆ ಈ ಘಟನೆ ಸಾಕಿ.

ಸ್ಪಷ್ಟವಾಗಿ ಹೇಳಬೇಕೆಂದರೆ ಇವತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕನಿಷ್ಠ ನಲವತ್ತರಿಂದ ಐವತ್ತು ಕೋಟಿ ರೂಪಾಯಿ ಬೇಕು. ಇದು ರಾಜಧಾನಿ ಬೆಂಗಳೂರು ಮತ್ತು ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚು. ಗಡಿ ಭಾಗದ ಜಿಲ್ಲೆಗಳಲ್ಲಿ ಇದಕ್ಕಿಂತ ಸ್ವಲ್ಪ ಕಡಿಮೆ ಇರಬಹುದು. ಆದರೆ ಒಟ್ಟಿನಲ್ಲಿ ಸ್ಪರ್ಧೆಯ ಕಣಕ್ಕಿಳಿಯುವವರು ದೊಡ್ಡ ಪ್ರಮಾಣದ ದುಡ್ಡು ಹೊಂದಿರಲೇಬೇಕು.

ಈ ಪೈಕಿ ಕೆಲವರಿಗೆ ಸ್ವಪಕ್ಷದಿಂದ ನಿಧಿ ಒದಗಿಸುವ ಕೆಲಸ ಆಗುತ್ತದೆ ಯಾದರೂ ಅದು ಕಡಿಮೆ ಮತ್ತು ಹೀಗೆ ಚುನಾವಣಾ ನಿಧಿ ಪಡೆಯುವ ಬಹುತೇಕರು ಹಾಲುಂಡಿ ಕೇಡರಿನವರು. ಅರ್ಥಾತ್, ಅವರದು ಗೆಲುವಿಗಿಂತ ಮುಖ್ಯವಾಗಿ ಸಾಂಕೇತಿಕ ಸ್ಪರ್ಧೆ ಮಾತ್ರ.

ಇರಲಿ, ಈಗ ದೊಡ್ಡ ಪ್ರಮಾಣದ ದುಡ್ಡನ್ನು ಬಂಡವಾಳವಾಗಿ ಹೂಡುವವರು ಗೆದ್ದರು ಅಂತಿಟ್ಟುಕೊಳ್ಳಿ, ಅವರು ಹಾಕಿದ ಬಂಡವಾಳವನ್ನು ಹಿಂತಿರುಗಿ ಪಡೆಯಲು ಕಸರತ್ತು ಆರಂಭಿಸುತ್ತಾರೆ. ಒಂದು ವೇಳೆ ಭಾರೀ ಬಂಡವಾಳ ಹೂಡಿಯೂ ಸೋಲು ಅನುಭವಿಸಿದರು ಎಂದುಕೊಳ್ಳಿ, ಅದರಿಂದ ಅವರು ಚೇತರಿಸಿಕೊಳ್ಳುವ ಶಕ್ತಿ ಹೊಂದಿರಬೇಕು.

ಹೀಗೆ ಹಾಕಿದ ಹಣವನ್ನು ಪಡೆಯುವ ಮತ್ತು ಹಣ ಕಳೆದುಕೊಂಡರೂ ಅದರಿಂದ ಚೇತರಿಸಿಕೊಳ್ಳುವ ಶಕ್ತಿ ಇಲ್ಲದವರು ಇವತ್ತು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂದ ಮೇಲೆ ಸಾಮಾನ್ಯ ಕಾರ್ಯಕರ್ತರು ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವೇ?

ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಮಾನ್ಯ ವ್ಯಕ್ತಿ ತನ್ನ ಅರ್ಹತೆಯಿಂದ ಗೆಲುವು ಸಾಧಿಸಲು ಸಾಧ್ಯವಾಗುವುದೇ ನಿಜವಾದ ಪ್ರಜಾಪ್ರಭುತ್ವ, ಏಕೆಂದರೆ ಹೀಗೆ ಗೆಲ್ಲುವ ವ್ಯಕ್ತಿ ವೈಯಕ್ತಿಕ ಉದ್ದೇಶಗಳಿಗಾಗಿ ತನ್ನನ್ನು ಮಿತಗೊಳಿಸಿಕೊಳ್ಳದೆ ಜನ ಸೇವೆ ಮಾಡಲು ಹೆಚ್ಚಿನ ಆದ್ಯತೆ ನೀಡಲು ಸಾಧ್ಯ.

ಹೀಗೆ ಶ್ರೀಸಾಮಾನ್ಯರಾಗಿದ್ದು ಬೆಳೆದು ನಿಂತವರಲ್ಲಿ ಶಾಂತವೇರಿ ಗೋಪಾಲಗೌಡರಂತಹ ನೂರಾರು ನಾಯಕರ ಮಹಾನ್ ಪರಂಪರೆಯೇ ಕರ್ನಾಟಕದಲ್ಲಿದೆ. ಆದರೆ ಈಗಿನ ಸ್ಥಿತಿ ನೋಡಿದರೆ ಇಂತಹ ಪರಂಪರೆ ಮುಂದುವರಿಯುವುದು ಹಾಗಿರಲಿ, ಇಂತಹದೊಂದು ಪರಂಪರೆ ಇತ್ತು ಎಂದು ನಂಬಲೂ ಕಷ್ಟವಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ.

ಹಾಗೆ ನೋಡಿದರೆ ಇದು ಬ್ರಿಟಿಷ್ ಪೂರ್ವ ಇಂಡಿಯಾದ ಪರಿಸ್ಥಿತಿ. ಅರ್ಥಾತ್, ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತ ಆರು ನೂರಕ್ಕೂ ಅಧಿಕ ಸಂಸ್ಥಾನಗಳನ್ನು ಒಳಗೊಂಡಿತ್ತು. ಪ್ರತಿಯೊಂದು ಸಂಸ್ಥಾನವೂ ತನ್ನದೇ ಚೌಕಟ್ಟಿನಲ್ಲಿ ಸಾರ್ವಭೌಮತ್ವವನ್ನು ಹೊಂದಿತ್ತು.

ಇಂತಹ ಸಾರ್ವಭೌಮತ್ವವನ್ನು ನೂರಾರು ಮಂದಿ ಹೊಂದಿದ್ದರು ಎಂಬ ಕಾರಣಕ್ಕಾಗಿ ಪರಸ್ಪರರಲ್ಲಿ ಪೈಪೋಟಿ ಇತ್ತು. ಈ ಸನ್ನಿವೇಶವನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಂಡ ಬ್ರಿಟಿಷರು ಎಲ್ಲ ಸಂಸ್ಥಾನಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಭಾರತವನ್ನು ಆಳಿದರು.

ಮುಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇಂತಹ ಎಲ್ಲ ಸಂಸ್ಥಾನಗಳನ್ನೂ ಒಂದುಗೂಡಿಸಿ ಭಾರತ ಗಣರಾಜ್ಯವನ್ನು ನಿರ್ಮಿಸಲಾಯಿತು ಎಂಬುದು ಇತಿಹಾಸ. ಆದರೆ ಈಗೇನಾಗಿದೆ? ಕಾಲಕ್ರಮೇಣ ರಾಜಪ್ರಭುತ್ವದ
ಸಂಕೇತಗಳು ಮರುಕಳಿಸತೊಡಗಿವೆ.

ಮರುಕಳಿಸುವುದಷ್ಟೇ ಅಲ್ಲ, ತಮ್ಮ ತಮ್ಮ ನೆಲೆಯಲ್ಲಿ ಸಾಮಂತರನ್ನು ಸೃಷ್ಟಿಸಿಕೊಂಡು ಆಳುತ್ತಿವೆ. ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುತ್ತೇವೆ ಎನ್ನುವವರ ಮಾತನ್ನು ನಂಬಿ ಮತದಾರರು ಇಂತಹ ಸಂಸ್ಥಾನಗಳನ್ನು, ಆ ಸಂಸ್ಥಾನಗಳಿಗೆ ನಿಷ್ಠರಾದ ಸಾಮಂತರನ್ನು ಸೃಷ್ಟಿಸತೊಡಗಿದ್ದಾರೆ.

ಈ ಸ್ಥಿತಿಯಿಂದ ಪಾರಾಗಲು ಭಾರತಕ್ಕೆ ಮತ್ತೊಂದು ಸರ್ವೋದಯ ಚಳವಳಿಯ ಅಗತ್ಯವಿದೆ. ಆದರೆ ಅದನ್ನು ರೂಪಿಸಬಲ್ಲ ಜಯಪ್ರಕಾಶ್ ನಾರಾಯಣ್ ಅವರಂತಹ ನಾಯಕರು ಎಲ್ಲಿದ್ದಾರೆ?

ಎಲ್ಲಕ್ಕಿಂತ ಮುಖ್ಯವಾಗಿ ಐವತ್ತು ವರ್ಷಗಳ ಹಿಂದೆ ಜಯಪ್ರಕಾಶ್ ನಾರಾಯಣ್ ಅವರು ರೂಪಿಸಿದ ಚಳವಳಿಗೆ ಮುಖಾಮುಖಿಯಾಗಿದ್ದವರು ಇಂದಿರಾ ಗಾಂಧಿ, ಆದರೆ ಅವರು ವಂಶಪಾರಂಪರ್ಯ ರಾಜಕಾರಣದ ಪ್ರತೀಕವಾಗಿದ್ದರೂ, ಸರ್ವಾಧಿಕಾರದ ಪ್ರತೀಕವಾಗಿದ್ದರೂ ಅವರು ಬಡವರ ಪರವಾಗಿದ್ದರು.

ಆದರೆ ಈಗ ಯಾರ ವಿರುದ್ಧ ಸರ್ವೋದಯ ಚಳವಳಿ ರೂಪುಗೊಳಬೇಕಿದೆಯೋ ಅವರು ಶ್ರೀಮಂತರ ಪರವಾಗಿರುವವರು. ಅವತ್ತು ಇಂದಿರಾ ಗಾಂಧಿ ವಿರುದ್ಧದ ಹೋರಾಟಕ್ಕೆ ಪರೋಕ್ಷವಾಗಿ ಬಂಡವಾಳ ಹೂಡಲು ಶ್ರೀಮಂತರಾದರೂ ಇದ್ದರು. ಆದರೆ ಶ್ರೀಮಂತರ ಪರವಾಗಿರುವವರೇ ಇವತ್ತು ರಾಜಪ್ರಭುತ್ವವನ್ನು ಕಟ್ಟಿಕೊಳ್ಳುತ್ತಿರುವಾಗ, ಸಾಮಂತರಾಗುತ್ತಿರುವಾಗ ಅವರ ವಿರುದ್ಧದ ಚಳವಳಿಗೆ ಬಂಡವಾಳ ಹೂಡುವವರು ಯಾರಿದ್ದಾರೆ? ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಆತಂಕದ ಸಂಗತಿ ಬೇಕೆ?