Light
Dark

ಬೆಂಗಳೂರು ಡೈರಿ : ಸರ್ವವ್ಯಾಪಿಯಾದ ಭ್ರಷ್ಟ ಮನಃಸ್ಥಿತಿಯ ಉಪಸ್ಥಿತಿ!

ಈಗ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಭ್ರಷ್ಟಾಚಾರದ ಆರೋಪ ಇಲ್ಲದ ಸಚಿವರೇ ವಿರಳ ಎಂಬಂತಾಗಿದೆ

ಇದು ಕೆಂಗಲ್ ಹನುಮಂತಯ್ಯ ಅವರ ಕಾಲದಲ್ಲಿ ನಡೆದ ಘಟನೆ.
ಆ ಸಂದರ್ಭದಲ್ಲಿ ಅವರ ಸಂಪುಟ ಸಹೋದ್ಯೋಗಿಯಾಗಿದ್ದ ಟಿ.ಸಿದ್ದಲಿಂಗಯ್ಯ ಅವರ ಬಗ್ಗೆ ಒಂದು ಆರೋಪ ಕೇಳಿ ಬಂತು.
ತಮ್ಮ ಸಂಬಂಧಿಯೊಬ್ಬರಿಗೆ ವಿದ್ಯುತ್ ಇಲಾಖೆಯ ಉಪಕರಣ ಖರೀದಿ ವ್ಯವಹಾರದ ಗುತ್ತಿಗೆ ಕೊಡಿಸಲು ಅವರು ಪ್ರಭಾವ ಬೀರಿದರು ಎಂಬುದು ಈ ಆರೋಪ.
ತಮ್ಮ ವಿರುದ್ಧ ಕೇಳಿ ಬಂದ ಈ ಆರೋಪದ ಹಿನ್ನೆಲೆಯಲ್ಲಿ ಸಿದ್ದಲಿಂಗಯ್ಯ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.
ಅವರನ್ನು ನೋಡಿದ್ದೇ ತಡ, ನೀವು ಬಂದೇ ಬರುತ್ತೀರಿ ಅಂತ ನನಗೆ ಗೊತ್ತಿತ್ತು ಎಂದರು ಹನುಮಂತಯ್ಯ. ವಸ್ತುಸ್ಥಿತಿ ಎಂದರೆ ಕೆಂಗಲ್ ಹನುಮಂತಯ್ಯ ಅವರೇನೂ ಸಿದ್ದಲಿಂಗಯ್ಯ ಅವರ ರಾಜೀನಾಮೆ ಕೇಳಿರಲಿಲ್ಲ. ಯಾಕೆಂದರೆ ಸಿದ್ದಲಿಂಗಯ್ಯ ಎಷ್ಟು ಪ್ರಾಮಾಣಿಕರು ಅನ್ನುವುದು ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ಈ ಬಗ್ಗೆ ಮೌನವಾಗಿದ್ದರು.
ಆದರೆ ಸಿದ್ದಲಿಂಗಯ್ಯ ಮಾತ್ರ, ಆರೋಪ ಸುಳ್ಳೇ ಇರಬಹುದು. ಆದರೂ ಈ ಆರೋಪ ಜನತಾ ನ್ಯಾಯಾಲಯದ ಮುಂದೆ ಮಂಡನೆಯಾಗಿ ಹೋಗಿದೆ. ಹೀಗಾಗಿ ನೈತಿಕತೆಯ ದೃಷ್ಟಿಯಿಂದ ನಾನು ಈ ಜಾಗದಲ್ಲಿ ಮುಂದುವರಿಯುವುದು ತರವಲ್ಲ. ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಿ ಎಂದು ಮನವಿ ಮಾಡಿದರು. ಹೀಗೆ ಸಿದ್ಧಲಿಂಗಯ್ಯ ಅವರು ನೀಡಿದ ರಾಜೀನಾಮೆಯನ್ನು ಸ್ವೀಕರಿಸದೆ ಕೆಂಗಲ್ ಹನುಮಂತಯ್ಯ ಅವರಿಗೆ ಗತ್ಯಂತರವಿರಲಿಲ್ಲ.
****
೧೯೫೮ ರಲ್ಲಿ ಮುಖ್ಯಮಂತ್ರಿಗಳಾದ ಬಿ.ಡಿ.ಜತ್ತಿ ಅವರ ವಿರುದ್ಧ ಸ್ವಪಕ್ಷೀಯರೇ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.
ಅಂದ ಹಾಗೆ ಈ ಆರೋಪ ಎದ್ದ ಕಾಲಕ್ಕಾಗಲೇ ಆಡಳಿತಾ ರೂಢ ಕಾಂಗ್ರೆಸ್ ಪಕ್ಷದಲ್ಲಿ ಅಂತಃಕಲಹ ಶುರುವಾಗಿತ್ತು. ಇಂತಹ ಅಂತ:ಕಲಹವೇ ೧೯೫೭ರ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿಯಾದ ನಿಜಲಿಂಗಪ್ಪ ಅಧಿಕಾರದಿಂದ ಕೆಳಗಿಳಿಯಲು ಕಾರಣವಾಗಿತ್ತು. ನಿಜಲಿಂಗಪ್ಪ ಅವರ ಪದಚ್ಯುತಿಯ ನಂತರ ಮುಖ್ಯಮಂತ್ರಿಗಳಾದ ಬಿ.ಡಿ.ಜತ್ತಿ ಅವರ ವಿರುದ್ಧವೂ ಆರೋಪ ಕೇಳಿ ಬಂತು. ಹೀಗೆ ಅವರ ವಿರುದ್ಧ ಆರೋಪ ಕೇಳಿ ಬಂದಾಗ ಪ್ರಧಾನಿ ಜವಾಹರಲಾಲ್ ನೆಹರೂ ಸುಮ್ಮನಿರಲಿಲ್ಲ. ಬದಲಿಗೆ ತಮ್ಮ ಸಂಪುಟದಲ್ಲಿದ್ದ ಹಿರಿಯ ನಾಯಕರೊಬ್ಬರನ್ನು ಆರೋಪದ ಬಗ್ಗೆ ತನಿಖೆ ನಡೆಸಲು ರಾಜ್ಯಕ್ಕೆ ಕಳಿಸಿದರು. ಹೀಗೆ ನೆಹರೂ ಅವರ ಸೂಚನೆಯಂತೆ ರಾಜ್ಯಕ್ಕೆ ಬಂದ ಆ ಸಚಿವರು ಖುದ್ದು ಮುಖ್ಯಮಂತ್ರಿಯವರನ್ನೇ ತಮ್ಮ ಸಮ್ಮುಖದಲ್ಲಿ ಕೂರಿಸಿಕೊಂಡು ಆರೋಪವಿದ್ದ ಕಡತವನ್ನು ಪರಿಶೀಲಿಸಿದರು. ಈ ತನಿಖೆಯ ನಂತರ, ಬಿ.ಡಿ.ಜತ್ತಿಯವರ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದರು.
****
೧೯೭೨ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಗಳಾದರಲ್ಲ ಆ ಕಾಲದಲ್ಲಿ ಶಾಸಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅರಸರನ್ನು ಭೇಟಿ ಮಾಡಿದರು. ಗುತ್ತಿಗೆದಾರರೊಬ್ಬರ ಕೆಲಸ ಮಾಡಿಸಿಕೊಡುವಂತೆ ಅವರು ಕೇಳಿಕೊಂಡಾಗ ದೇವರಾಜ ಅರಸರು, ಆ ಗುತ್ತಿಗೆದಾರನನ್ನು ನನ್ನ ಬಳಿ ಕಳಿಸು. ಕೆಡುವುದಿದ್ದರೆ ನನ್ನ ಕೈ ಕೆಡಲಿ. ನಿನ್ನ ಕೈ ಕೆಡಬಾರದು ಎಂದರಂತೆ. ಅಂದ ಹಾಗೆ ಸರ್ಕಾರ ನಡೆಸುವವರು ಭ್ರಷ್ಟರಾಗಲೇಬೇಕು ಎಂಬಂತಹ ವಾತಾವರಣ ಅರಸರ ಕಾಲದಲ್ಲಿ ಬೇರೂರತೊಡಗಿತ್ತು. ಆದರೆ ಭ್ರಷ್ಟಾಚಾರದಲ್ಲಿ ಮಂತ್ರಿಗಳು, ಶಾಸಕರು ಕೈ ಕೆಡಿಸಿಕೊಳ್ಳುವುದು ಬೇಡ. ಹಾಗೆ ಕೆಡಿಸಿಕೊಂಡರೆ ದುಡ್ಡಿದ್ದವರ ಮುಲಾಜಿಗೆ ಸಿಲುಕಿ ಜನರಿಂದ ದೂರವಾಗುತ್ತಾರೆ ಎಂಬುದು ಅರಸರ ಯೋಚನೆಯಾಗಿತ್ತು.
****
೧೯೮೩ರಲ್ಲಿ ಅಸ್ತಿತ್ವಕ್ಕೆ ಬಂದ ಜನತಾರಂಗ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಎಷ್ಟೇ ಮೌಲ್ಯಾಧಾರಿತ ರಾಜಕಾರಣದ ಮಾತನಾಡಿದರೂ ಅವರ ವಿರುದ್ಧ ಬಾಟ್ಲಿಂಗ್ ಹಗರಣದಿಂದ ಹಿಡಿದು ರೇವಜಿತು ಹಗರಣದವರೆಗೆ ಹಲವು ಆರೋಪಗಳು ಕೇಳಿ ಬಂದವು.
ಭ್ರಷ್ಟಾಚಾರದ ಇಂತಹ ಆರೋಪಗಳನ್ನು ಎದುರಿಸಿ ಹೆಗಡೆ ಗೆದ್ದರಾದರೂ, ಅವರು ಅಧಿಕಾರದಿಂದ ಪದಚ್ಯುತರಾಗಿದ್ದಕ್ಕೆ ಭ್ರಷ್ಟಾಚಾರದ ಆರೋಪ ಕಾರಣವಲ್ಲ ಎಂಬುದು ಗಮನಾರ್ಹ.
****
೧೯೯೦ರಲ್ಲಿ ಮುಖ್ಯಮಂತ್ರಿಗಳಾದ ಬಂಗಾರಪ್ಪ ಅವರ ವಿರುದ್ಧ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಆರೋಪ ಕೇಳಿ ಬಂತು. ಈ ಆರೋಪ ಎದ್ದ ಕಾಲಕ್ಕಾಗಲೇ ಬಂಗಾರಪ್ಪ ಅವರ ವಿರುದ್ಧ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾಯರು ಮುನಿಸಿಕೊಂಡಿದ್ದರು. ಅವರ ಈ ಮುನಿಸನ್ನು ಅಸ್ತ್ರವಾಗಿ ಮಾಡಿಕೊಂಡ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಕ್ಲಾಸಿಕ್ ಕಂಪ್ಯೂಟರ್ ಹಗರಣದ ಆರೋಪದ ಘಮಲು ಹರಡುವಂತೆ ನೋಡಿಕೊಂಡರು.
ಮುಂದೆ ಈ ಹಗರಣದ ತನಿಖೆ ನಡೆಸಿದ ಸಿಬಿಐಗೆ ಇದನ್ನು ಪುಷ್ಟೀಕರಿಸಲು ಸಾಧ್ಯವಾಗಲಿಲ್ಲ. ಮುಂದೆ ದೇವೇಗೌಡರ ಕಾಲದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡು ಗುತ್ತಿಗೆ ಹಗರಣ ಕೇಳಿ ಬಂತು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಒಂದಂಕಿ ಲಾಟರಿಯಿಂದ ಹಿಡಿದು ಕೆಲ ಹಗರಣಗಳ ಆರೋಪ ಕೇಳಿ ಬಂದವು. ಆದರೆ ಅಲ್ಲಿಯವರೆಗೆ ಕೇಳಿ ಬಂದ ಆರೋಪಗಳ ಸುಳಿಗೆ ಮುಖ್ಯಮಂತ್ರಿಗಳಾದವರು ಸಿಲುಕುತ್ತಿದ್ದರು. ಕೆಲ ಸಚಿವರ ಹೆಸರುಗಳೂ ಅಪರೂಪಕ್ಕೆ ಕೇಳುತ್ತಿದ್ದವು.
****
ಮುಂದೆ ಸಮ್ಮಿಶ್ರ ಸರ್ಕಾರದ ಯುಗ ಆರಂಭವಾದ ನಂತರ ಹಗರಣಗಳ ಆರೋಪದಲ್ಲಿ ಮುಖ್ಯಮಂತ್ರಿಗಳು ಮಾತ್ರವಲ್ಲದೆ ಅವರ ಸಂಪುಟದ ಹಲ ಸಚಿವರ ಹೆಸರುಗಳೂ ಕೇಳತೊಡಗಿದವು. ಈಗ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಭ್ರಷ್ಟಾಚಾರದ ಆರೋಪ ಇಲ್ಲದ ಸಚಿವರೇ ವಿರಳ ಎಂಬಂತಾಗಿದೆ.
ಅಷ್ಟೇ ಯಾಕೆ, ಇತ್ತೀಚೆಗೆ ಸರ್ಕಾರದ ವಿರುದ್ಧ ಕಮಿಷನ್ನಿನ ಆರೋಪ ಹೊರಿಸಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಎಲ್ಲ ೨೨೪ ಜನ ಪ್ರತಿನಿಧಿಗಳೂ ಭ್ರಷ್ಟರೇ ಎಂದು ಆರೋಪಿಸಿದರು.
ಅಂದ ಹಾಗೆ ಹಾಲಿ ಬಿಜೆಪಿ ಸರ್ಕಾರದ ವಿರುದ್ಧ ನಲವತ್ತು ಪರ್ಸೆಂಟ್‌ಕಮಿಷನ್ನಿನ ಆರೋಪದಿಂದ ಹಿಡಿದು, ಹತ್ತು ಹಲವು ಆರೋಪಗಳಿವೆ.
ಸರ್ಕಾರದ ಯಾವುದೇ ಒಂದು ಇಲಾಖೆಯಲ್ಲಿ ಕಾಣಿಕೆ ಸಲ್ಲಿಸದೆ ಕೆಲಸ ಮಾಡಿಸಬಹುದು ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ.
ಪರಿಣಾಮ? ಒಂದು ಕಾಲದಲ್ಲಿ ನನಗೂ ಇರಲಿ, ನನ್ನ ತಲೆಮಾರಿಗೂ ಇರಲಿ ಎನ್ನುತ್ತಿದ್ದ ವರ್ಗ ಬೆಳೆಯುವುದರ ಜತೆಗೆ, ಬದುಕು ನಡೆಸಲು ಇವತ್ತು ಹಲವು ಮಾರ್ಗಗಳು ಬೇಕು ಅಂತ ಹಪಹಪಿಸುವ ವರ್ಗವೂ ಹೆಚ್ಚಾಗಿದೆ. ಅರ್ಥಾತ್, ಭ್ರಷ್ಟರಾಗದೆ ಬದುಕು ನಡೆಸುವುದು ಕಷ್ಟ ಎಂಬ ಮನ:ಸ್ಥಿತಿ ಸಾರ್ವ ತ್ರಿಕವಾಗಿದೆ.
ಹೀಗಾಗಿ ಸರ್ಕಾರಿ ಕಚೇರಿ ಅಂತಲ್ಲ, ಯಾವ ಅಗತ್ಯಗಳನ್ನು ಪಡೆಯಲು ಹೋದರೂ ಅಲ್ಲಿ ಭ್ರಷ್ಟ ಮನ:ಸ್ಥಿತಿಯ ಉಪಸ್ಥಿತಿ ಇರುತ್ತದೆ. ಮೇಲ್ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರಕ್ಕೂ ತಳಮಟ್ಟದವರೆಗೆ ನಡೆಯುವ ಭ್ರಷ್ಟಾಚಾರಕ್ಕೂ ಒಂದು ಅಂತರ್ ಸಂಬಂಧವಿದೆ. ಇದನ್ನು ನಿವಾರಿಸುವುದು ಹೇಗೆ? ಅನ್ನುವ ಪ್ರಶ್ನೆ, ನೈತಿಕತೆಯ ದಡದಿಂದ ಈಜು ಬಿದ್ದು ಭ್ರಷ್ಟಾಚಾರದ ದಡ ತಲುಪಿದವನ ಚಿಂತೆಯಂತೆ ಕಾಣುತ್ತದೆ.
ಅದೇ ಇವತ್ತಿನ ವಿಪರ್ಯಾಸ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ