ಚೆನೈ :ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ದೇಶವನ್ನು ಆಳಲು ಇನ್ನೊಂದು ಅವಕಾಶ ನೀಡಬೇಡಿ ಎಂದು ಮಕ್ಕಳ್ ನೀದಿ ಮೈಯ್ಯಮ್ (ಎಂಎನ್‌ಎಂ)ನ ಸ್ಥಾಪಕ ನಟ ಕಮಲ್ ಹಾಸನ್ ಅವರು ಆಗ್ರಹಿಸಿದ್ದಾರೆ.
ವಿಸಿಕೆ ಅಧ್ಯಕ್ಷ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಚಿದಂಬರಂ ಲೋಕಸಭಾ ಕ್ಷೇತ್ರ (ಮೀಸಲು) ದ ಅಭ್ಯರ್ಥಿ ತೋಲ್ ತಿರುಮಾವಲವನ್ ಅವರ ಪರವಾಗಿ ಚಿದಂಬರಂನಲ್ಲಿ ಬುಧವಾರ ರಾತ್ರಿ ಕಮಲ್ ಹಾಸನ್ ಪ್ರಚಾರ ನಡೆಸಿದರು.
ಬಿಜೆಪಿ ನೇತೃತ್ವದ ಎನ್ಡಿಎ ಸಂಪೂರ್ಣವಾಗಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಬಿಜೆಪಿ ಕೂಡ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ದೇಶ ಪ್ರಜಾಪ್ರಭುತ್ವದ ತತ್ವಗಳಿಂದ ಸಂಪೂರ್ಣವಾಗಿ ವಂಚಿತವಾಗಲಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಅತಿ ದೊಡ್ಡ ಅಪಾಯದಲ್ಲಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಿಜೆಪಿಯ ಕುತಂತ್ರದಿಂದ ದೇಶವನ್ನು ಉಳಿಸಲು ಎಲ್ಲಾ ಜಾತ್ಯತೀತ ಹಾಗೂ ಸಮಾನ ಮನಸ್ಕ ಶಕ್ತಿಗಳೊಂದಿಗೆ ತಾನು ಕೈಜೋಡಿಸಿದ್ದೇನೆ ಎಂದು ಅವರು ಹೇಳಿದರು.