ಬೆಂಗಳೂರು : ಬಿಜೆಪಿಯ ಆಂತರಿಕ ಕಲಹ ಈಗ ಆಂತರಿಕವಾಗಿಲ್ಲ, ಬೀದಿ ಜಗಳವಾಗಿ ಪರಿಣಮಿಸಿದೆʼ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರು ಬಿಜೆಪಿ ಸಂಸದರ ಮೇಲೆ ಕೊಲೆ ಷಡ್ಯಂತ್ರದ ಆರೋಪ ಹೋರಿಸಿದ ನಂತರ ಭಗವಂತ ಖೂಬಾ ಅವರು ಅಹಿತಕರ ಘಟನೆ ನಡೆದರೆ ನಾನು ಹೊಣೆಯಲ್ಲ ಎಂದು ಅಂಟಿಸಿಪೇಟರಿ ಬೇಲ್ ಪಡೆಯುತ್ತಿದ್ದಾರೆ. ಇದರ ಅರ್ಥ ಚೌಹಾಣ್ ಅವರು ಮುಂದೆ ಅಹಿತಕರ ಘಟನೆಯನ್ನು ಎದುರಿಸಬೇಕಾಗುತ್ತದೆ ಎಂಬ ಸುಳಿವು ನೀಡಿದ್ದೇ ಎಂದು ಸಂಶಯ ವ್ಯಕ್ತಪಡಿಸಿದೆ.
ಬಿಜೆಪಿ ಶಾಸಕರ ಆರೋಪದ ಬಗೆಗಿನ ತನಿಖೆಗೆ ರಾಜ್ಯದ ಪೋಲೀಸರ ಬದಲು ಸಿಬಿಐ ತನಿಖೆಗೆ ಆಗ್ರಹಿಸಿಲ್ಲವೇಕೆ? ಸಂಸದರ ಷಡ್ಯಂತ್ರದ ಬಗ್ಗೆ ಮೋದಿಗೆ ದೂರು ಕೊಡಲಿಲ್ಲವೇಕೆ? ತಮ್ಮ ಶಾಸಕರಿಗೆ ಜೀವ ಬೆದರಿಕೆ ಇದ್ದರೂ ಬಿಜೆಪಿ ಮೌನ ವಹಿಸಿರುವುದೇಕೆ? ಎಂದು ಕಾಂಗ್ರೆಸ್ ರಾಜ್ಯ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
ಕೇಂದ್ರ ಸಚಿವ ಭಗವಂತ ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ವಿಫಲವಾಗಿದ್ದರಿಂದ ಈಗ ತಾನು ಸಾಕಿದ ಗೂಂಡಾಗಳಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದರು.
ಈ ವಿಚಾರವಾಗಿ ಬೀದರ್ ಎಸ್ ಪಿ ಗೆ ಪತ್ರ ಬರೆದಿರುವ ಕೇಂದ್ರ ಸಚಿವ ಭಗವಂತ ಖೂಬಾ ಅಹಿತಕರ ಘಟನೆ ನಡೆದರೆ ನಾನು ಹೊಣೆಯಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.