ನವದೆಹಲಿ: ಸುಳ್ಳು ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ಪ್ರಯತ್ನ ಮಾಡಿದ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಕೋರಿದ ಕ್ಷಮೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಭಾರತೀಯ ವೈದ್ಯಕೀಯ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಹಿಮಕೊಹ್ಲಿ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಮಂಗಳವಾರವಾದ ಇಂದು ಕೋರ್ಟ್ ಮುಂದೆ ಹಾಜರಾಗಿದ್ದ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದೆ.
ಕಳೆದ ನವೆಂಬರ್‌ನಲ್ಲಿ ಪತಂಜಲಿ ಸಂಸ್ಥೆ ಪರ ವಕೀಲರು ನ್ಯಾಯಾಲಯದ ಮುಂದೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಡೆಯುವುದಾಗಿ ಭರವಸೆ ನೀಡಿದ ಹೊರತಾಗಿಯೂ ಪತಂಜಲಿ ಸಂಸ್ಥೆ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿತ್ತು. ಈ ಹಿನ್ನಲೆ ಕೋರ್ಟ್ ಫೆಬ್ರವರಿ 27 ರಂದು ಪತಂಜಲಿ ಸಂಸ್ಥೆ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಾದ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು, ಖುದ್ದು ಹಾಜರಾಗಲು ಸೂಚಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಲು ನೋಟಿಸ್ ನೀಡಿದ್ದರೂ ನಿರ್ಲಕ್ಷಿಸಿದ್ದ ಈ ಇಬ್ಬರೂ ಕೋರ್ಟ್ ಮುಂದೆ ಖುದ್ದು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತಾಕೀತು ಮಾಡಿತ್ತು.
ಮಂಗಳವಾರ (ಏಪ್ರಿಲ್ 2) ಕೋರ್ಟ್ ಮುಂದೆ ಹಾಜರಾದ ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್ ಬೇಷರತ್ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಿದರು. ಅಫಿಡೆವಿಟ್ ನಲ್ಲಿ ಜಾಹೀರಾತು ಪ್ರಸಾರಕ್ಕೆ ತಡೆ ನೀಡುವ ಆದೇಶ ನಮ್ಮ ಮಾಧ್ಯಮ ವಿಭಾಗಕ್ಕೆ ತಿಳಿದಿರಲಿಲ್ಲ ಹೀಗಾಗೀ ತಪ್ಪಾಗಿದೆ ಎಂದು ಆಚಾರ್ಯ ಬಾಲಕೃಷ್ಣ ಕ್ಷಮೆ ಕೇಳಿದ್ದರು, ಆದರೆ ಈ ಕಾರಣವನ್ನು ಕೋರ್ಟ್ ನಿರಾಕರಿಸಿತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಈ ವಿಷಯದಲ್ಲಿ ʻಅಜ್ಞಾನವನ್ನು ತೋರಿಸಲುʼ ಸಾಧ್ಯವಿಲ್ಲ ಮತ್ತು ಮಾಧ್ಯಮ ವಿಭಾಗವನ್ನು ʻಸ್ವತಂತ್ರ ದ್ವೀಪʼ ಎಂದು ಪರಿಗಣಿಸಲಾಗುವುದಿಲ್ಲ. ಒಮ್ಮೆ ನ್ಯಾಯಾಲಯಕ್ಕೆ ಭರವಸೆ ನೀಡಿದರೆ ನಂತರ ಅದನ್ನು ಸಂಪೂರ್ಣವಾಗಿ ಪಾಲಿಸಬೇಕು. ಕೆಳ ಹಂತಕ್ಕೆ ನಿರ್ದೇಶಿಸುವುದು ಯಾರ ಕರ್ತವ್ಯ? ಎಂದು ನ್ಯಾಯಮೂರ್ತಿ ಹಿಮ ಕೊಹ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಚಾರ್ಯ ಬಾಲಕೃಷ್ಣ ಪರ ವಕೀಲರು ಇದರಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡರು, ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ನ್ಯಾ. ಹಿಮ ಕೊಹ್ಲಿ, ನಿಮ್ಮ ಪಶ್ಚಾತ್ತಾಪವು ನ್ಯಾಯಾಲಯಕ್ಕೆ ಸಾಕಾಗದೇ ಇರಬಹುದು. ಈಗ ನೀವು ಕ್ಷಮಿಸಿ ಎಂದು ಹೇಳಿದ್ದಕ್ಕೆ, ನಾವು ಕ್ಷಮಿಸಿದ್ದೇವೆ ಅಂತ ಹೇಳಬಹುದು. ಅಂತಹ ವಿವರಣೆಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ, ನಿಮ್ಮ ಮಾಧ್ಯಮ ವಿಭಾಗವು ಸ್ವತಂತ್ರ ಇಲಾಖೆಯಲ್ಲ, ಅಲ್ಲವೇ? ನ್ಯಾಯಾಲಯದ ವಿಚಾರಣೆಯಲ್ಲಿ ಏನಾಗುತ್ತಿದೆ ತಿಳಿದಿಲ್ಲ ಎಂದರೆ ಹೇಗೆ? ಈ ರೀತಿ ಸಮಾಧಾನಪಡಿಸುವ ಮಾತುಗಳು ಬೇಡ ಎಂದು ಅಸಮಾಧಾನ ಹೊರಹಾಕಿದರು.