ಕಳೆದ ವಾರ ನೂತನ ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ ಇದೀಗ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ದಾಖಲೆಯ ಮಟ್ಟದಲ್ಲಿ ಸಂಸದರ ಅಮಾನತಿಗೆ ಕಾರಣವಾಗಿದೆ. ನಿನ್ನೆ ಸೋಮವಾರ ಲೋಕಸಭೆಯ 46 ಹಾಗೂ ರಾಜ್ಯಸಭೆಯ 46 ಸಂಸದರು ಸೇರಿದಂತೆ ಒಟ್ಟು 92 ಸಂಸದರ ಅಮಾನತಾಗಿತ್ತು. ಇಂದು ಲೋಕಸಭೆಯ 49 ಸಂಸದರನ್ನು ಇಡೀ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಈ ಮೂಲಕ ಎರಡೇ ದಿನಗಳಲ್ಲಿ ಒಟ್ಟು 141 ಸಂಸದರ ಅಮಾನತು ಜರುಗಿದೆ.
ನಿನ್ನೆ 92 ಸದಸ್ಯರ ಅಮಾನತಾಗಿರುವುದು ಇತಿಹಾಸದಲ್ಲಿಯೇ ದಿನವೊಂದರಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಅಮಾನತಾದ ದಾಖಲೆ ಬರೆದಿದೆ. 1989ರಲ್ಲಿ ಒಂದೇ ದಿನ ಒಟ್ಟು 63 ಸಂಸದರ ಸಂಸದರನ್ನು ಅಮಾನತು ಮಾಡಲಾಗಿತ್ತು. ನಿನ್ನೆ ನಡೆದ ಅಮಾನತು ಪ್ರಕ್ರಿಯೆ ಈ ದಾಖಲೆಯನ್ನು ಹಿಂದಿಕ್ಕಿದೆ. ಇತಿಹಾಸದಲ್ಲಿ ಎರಡು ದಿನಗಳಲ್ಲಿ 141 ಸಂಸದರನ್ನು ಅಮಾನತುಗೊಳಿಸಿರುವುದು ಇದೇ ಮೊದಲು.