ಪ್ಯಾರಿಸ್: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಅವರು ತಮ್ಮ 118ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸೇಂಟ್ ಕ್ಯಾಥರೀನ್ ಲೇಬರ್ ನರ್ಸಿಂಗ್ ಹೋಮ್‌ನ ವಕ್ತಾರ ಡೇವಿಡ್ ತವೆಲ್ಲಾ ಎಎಫ್‌ಪಿಗೆ ತಿಳಿಸಿದ್ದಾರೆ.
ಸಿಸ್ಟರ್ ಆ್ಯಂಡ್ರೆ ಎಂದು ಕರೆಯಲ್ಪಡುತ್ತಿದ್ದ ರಾಂಡನ್ ಅವರು, ಫೆಬ್ರವರಿ 11, 1904ರಂದು ದಕ್ಷಿಣ ಫ್ರಾನ್ಸ್‌ನಲ್ಲಿ ಮೊದಲ ಮಹಾಯುದ್ಧ ಆರಂಭಕ್ಕೂ ಒಂದು ದಶಕಕ್ಕೂ ಮುನ್ನ ಜನಿಸಿದ್ದರು.
ಟೌಲೋನ್‌ನಲ್ಲಿರುವ ತಮ್ಮ ನರ್ಸಿಂಗ್ ಹೋಮ್‌ನಲ್ಲಿ ನಿದ್ರೆಯಲ್ಲಿದ್ದಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ವಕ್ತಾರ ಡೇವಿಡ್ ತಿಳಿಸಿದ್ದಾರೆ.
‘ಅವರ ಸಾವಿನ ಬಗ್ಗೆ ಬಹಳ ದುಃಖವಿದೆ. ಆದರೆ, ತಮ್ಮ ಪ್ರೀತಿಯ ಸಹೋದರನನ್ನು ಸೇರುವುದು ಅವರ ಬಯಕೆಯಾಗಿತ್ತು. ಅವರಿಗೆ ಈ ಸಾವು ಒಂದು ವಿಮೋಚನೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ 119ವರ್ಷ ವಯಸ್ಸಿನ ಜಪಾನ್‌ನ ಕೇನ್ ತನಕಾ ಅವರ ಮರಣಕ್ಕೂ ಮೊದಲು ಲುಸಿಲ್ ರಾಂಡನ್ ಅತ್ಯಂತ ಹಿರಿಯ ಯುರೋಪಿಯನ್ ಎಂದು ಕರೆಯಲ್ಪಡುತ್ತಿದ್ದರು. ಕೇನ್ ನಿಧನದ ಬಳಿಕ ಭೂಮಿಯ ಮೇಲೆ ಬದುಕಿರುವ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಏಪ್ರಿಲ್ 2022ರಲ್ಲಿ ಗಿನ್ನೆಸ್ ದಾಖಲೆಗೆ ಅವರ ಹೆಸರು ಸೇರ್ಪಡೆಯಾಗಿತ್ತು.