ಬಿಹಾರ: ಭಾರತದ ಮೇಲೆ ದಾಳಿ ನಡೆಸಿರುವ ಪ್ರತಿಯೊಬ್ಬ ಉಗ್ರರನ್ನು ಹುಡುಕಿ ಹುಡುಕಿ ಹೊಡೆದು ಮಣ್ಣಿನಲ್ಲಿ ಹೂತು ಹಾಕುತ್ತೇವೆ. ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ನೇರಾನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ಕಳೆದ ಮಂಗಳವಾರ ನಡೆದ ಉಗ್ರರ ದಾಳಿಯ ನಂತರ ಮೊದಲ ಬಾರಿಗೆ ಪ್ರಧಾನಿಯವರಿಂದ ಈ ಎಚ್ಚರಿಕೆ ಸಂದೇಶ ಬಂದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಸಾಮಾನ್ಯವಾಗಿ ದೇಶದ ಒಳಗಡೆ ಮೋದಿಯವರ ಭಾಷಣ ಹಿಂದಿಯಲ್ಲಿರುತ್ತದೆ. ಆದರೆ ಉಗ್ರರಿಗೆ ಎಚ್ಚರಿಕೆ ನೀಡುವಾಗ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಕಟು ಸಂದೇಶ ರವಾನಿಸಿದ್ದು ವಿಶೇಷವಾಗಿತ್ತು.
ಇದು ಕೇವಲ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲ. ಭಾರತದ ಆತದ ಮೇಲೆ ನಡೆದಿರುವ ದಾಳಿಯಾಗಿದೆ. ಬಿಹಾರದ ನೆಲದಲ್ಲಿ ನಿಂತು ನಾನು ಹೇಳುತ್ತಿದ್ದೇನೆ. ಅಮಾಯಕರನ್ನು ಹತ್ಯೆ ಗೈದಿರುವ ಉಗ್ರರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ತಕ್ಕಶಾಸ್ತಿ ಆಗಲಿದೆ ಎಂದು ಗುಡುಗಿದರು.
ನಾನು ಈ ಜಗತ್ತಿಗೆ ಸ್ಪಷ್ಟವಾದ ಸಂದೇಶ ಕೊಡಲು ಬಯಸುತ್ತೇನೆ. ಅಮಾಯಕರನ್ನು ಕೊಂದಿರುವವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಶಿಕ್ಷೆಯಾಗಲಿದೆ. ಪಹಲ್ಗಾಮ್‍ನಲ್ಲಿ ದಾಳಿ ಮಾಡಿದವರು ಮತ್ತು ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿಯಲ್ಲಿ ಶಿಕ್ಷೆಯಾಗುತ್ತದೆ ಎಂದು ಗುಡುಗಿದರು.





