ತಿರುವನಂತಪುರಂ: ಕೇರಳದ ವಯನಾಡು ಭೂಕುಸಿತ ದುರಂತದ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ಪರಿಹಾರ ಬಿಡುಗಡೆ ಆಗಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಬಂದಿರುವ 712.98 ಕೋಟಿ ರೂ ಅನ್ನು ಪರಿಹಾರ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ವಯನಾಡು ಭೂಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ರಾಜ್ಯ ಸರ್ಕಾರವು ಮೊದಲಿಗೆ 2,271 ಕೋಟಿ ರೂ ಮೊತ್ತ ಪರಿಹಾರ ಕೋರಿತ್ತು. ಆದರೆ, ವಿಪತ್ತಿನ ನಂತರದ ಅಗತ್ಯಗಳ ಮೌಲ್ಯಮಾಪನ ವರದಿಯ ಪ್ರಕಾರ ಇನ್ನೂ ಹೆಚ್ಚಿನ ಪರಿಹಾರ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರವು ವಯನಾಡು ಭೂಕುಸಿತವನ್ನು ತೀವ್ರ ಪ್ರಕೃತಿಯ ವಿಪತ್ತು ಎಂದು ಘೋಷಣೆ ಮಾಡಿದೆ. ಹೀಗಾಗಿ ಸಂಸದರು ಒಂದು ಕೋಟಿ ರೂ ದೇಣಿಗೆ ನೀಡಬಹುದಾಗಿದೆ. ನಾನು ಈಗಾಗಲೇ ದೇಶದ ಎಲ್ಲಾ ಸಂಸದರಿಗೂ ನೆರವು ಕೋರಿ ಪತ್ರ ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.