Mysore
21
scattered clouds
Light
Dark

ವಯನಾಡು ಭೂಕುಸಿತ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ನಕಾರ

ಕೇರಳ: ವಯನಾಡುವಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತ ಹಾಗೂ ಜಲಪ್ರಳಯ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ವರದಿಯಾಗಿದೆ.

ಈ ಮಧ್ಯೆ ವಯನಾಡಿನ ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ವಿಪತ್ತು ಪೀಡಿತ ಪ್ರದೇಶ ಎಂದು ಘೋಷಿಸಿ ಕೇರಳ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ.

ನಾವು ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ, ಆದರೆ, ಅವರು ಕಾನೂನಾತ್ಮಕ ಸಮಸ್ಯೆಗಳಿವೆ ಎಂದು ಹೇಳಿ ನಮ್ಮ ಮನವಿಯನ್ನು ನಿರಾಕರಿಸಿದ್ದಾರೆ. ಆದ್ದರಿಂದ ಈ ಭೀಕರ ದುರಂತವನ್ನು ರಾಜ್ಯ ವಿಪತ್ತು ಎಂದು ಘೋಷಿಸಲಿದ್ದೇವೆ ಎಂದು ಕೇರಳ ರಾಜ್ಯ ಸರ್ಕಾರದ ಕಂದಾಯ ಸಚಿವ ಕೆ.ರಾಜನ್‌ ಹೇಳಿದ್ದಾರೆ.

ಕೇರಳ ಆಡಳಿತ ಮತ್ತು ವಿರೋಧ ಪಕ್ಷಗಳು, ವಯನಾಡು ಭೂಕುಸಿತ ದುರಂತದ ಪರಿಹಾರಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಇದನ್ನು ರಾಷ್ಟ್ರೀಯ ವಿಪತ್ತು ಎಂದ ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಕ್ಯಾತೆ ತೆಗೆದಿದ್ದು, ವರದಿಯನ್ನು ನಿರಾಕರಿಸಿದೆ. ಈ ನಡುವೆ ಕೇರಳ ಸರ್ಕಾರ ಈ ದುರಂತವನ್ನು ರಾಜ್ಯ ವಿಪತ್ತು ಎಂದು ಘೋಷಿಸಿದೆ. ಈ ಬೆಳವಣಿಗೆ ಮತ್ತೊಂದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

2018ರಲ್ಲಿ 500 ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದ ದುರಂತ ಹೊರತುಪಡಿಸಿದರೆ, ಕೇರಳದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಪ್ರಕೃತಿ ವಿಕೋಪವಾಗಿದೆ. ಅರಬ್ಬೀಸಮುದ್ರದಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಮತ್ತು ಗಣಿಗಾರಿಕೆಯಂಥ ಪರಿಸರಕ್ಕೆ ಹಾನಿ ತರುವ ಚಟುವಟಿಕೆಗಳ ಏರಿಕೆಯಿಂದಾಗಿ, ಹಸಿರು ಮರೆಯಾಗಿರುವುದರಿಂದ ಇಂಥ ಭೂಕುಸಿತಗಳ ಹೆಚ್ಚುತ್ತಿವೆ ಎಂದು ಹವಮಾನ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಜುಲೈ 30 ರ ಮಧ್ಯರಾತ್ರಿ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಜಲಪ್ರಳಯದಲ್ಲಿ ಮೃತರ ಸಂಖ್ಯೆ ಶುಕ್ರವಾರ 300 ದಾಟಿದೆ. ಇನ್ನೂ 200ರಷ್ಟು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.